ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ರೈ ಸೂಚನೆ
ಮಂಗಳೂರು, ಎ.6: ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ ತುರ್ತು ಸಮಸ್ಯೆಗಳಿಗೆ ಸ್ಪಂದಿಸಲು ಅನುದಾನದ ಕೊರತೆ ಇಲ್ಲ. ಆದ್ದರಿಂದ ಅಧಿಕಾರಿಗಳು ಜಿಲ್ಲಾದ್ಯಂತ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಅಗತ್ಯ ಹಾಗೂ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚನೆ ನೀಡಿದ್ದಾರೆ.
ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಶಾಶ್ವತ ಕಾಮಗಾರಿಗೆ ಸಂಬಂಧಿಸಿ ಟಾಸ್ಕ್‌ಪೋರ್ಸ್ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶಗಳಿಗೆ 9.7 ಕೋ.ರೂ. ಹಾಗೂ ನಗರಗಳಿಗೆ 7 ಕೋ.ರೂ. ಸೇರಿ ಒಟ್ಟು 17 ಕೋ.ರೂ. ಬಿಡುಗಡೆಯಾಗಿದೆ. ಹಿಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಬರ ಪೀಡಿತ ತಾಲೂಕುಗಳೆಂದು ಘೋಷಿಸಲ್ಪಟ್ಟಿರುವ ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳಿಗೆ ತಲಾ 40 ಲಕ್ಷ ರೂ. ಹಾಗೂ ಇತರ ತಾಲೂಕುಗಳಿಗೆ ತಲಾ 20 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಾತನಾಡಿ, ನೀರಿಗೆ ಸಂಬಂಧಿಸಿ ಶಾಶ್ವತ ಕಾಮಗಾರಿಗೆ 33 ಕೋ.ರೂ. ಕೆರೆಗಳ ಪುನಶ್ಚೇತನಕ್ಕೆ 15 ಕೋ.ರೂ. ಪ್ರಸ್ತಾವ ಸಲ್ಲಿಸಲಾಗಿದೆ. ಮಂಗಳೂರು ತಾಲೂಕಿನ 12 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡ ಲಾಗುತ್ತಿದೆ. ಜಿಲ್ಲೆಯ ಯಾವುದೇ ಮೂಲೆಯ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಪ್ರಯತ್ನಿಸ ಲಾಗುತ್ತಿದೆ ಎಂದು ತಿಳಿಸಿದರು.
ಲಕ್ಯಾ ಡ್ಯಾಂ ನೀರು ತಾತ್ಕಾಲಿಕ ಬಳಕೆಗೆ ನ್ಯಾಯಾಲಯ ಅನುಮತಿ ಒದಗಿಸಿದೆ. ಪಾಲಿಕೆಯ 12 ವಾರ್ಡ್ ಗಳಿಗೆ ಈ ಡ್ಯಾಂನಿಂದ ನೀರು ಬಿಡುಗಡೆಯಾಗಲಿದೆ. ಈ ನೀರು ಬಳಕೆಗೆ ಸಂಬಂಧಿಸಿದ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮೂರು ತಿಂಗಳೊಳಗೆ ಲೇಡಿಗೋಶನ್ ಕಾಮಗಾರಿ ಪೂರ್ಣ
ನಗರದ ಪ್ರಮುಖ ಆಸ್ಪತ್ರೆಯಾಗಿರುವ ಲೇಡಿಗೋಶನ್‌ನ ಕಟ್ಟಡ ಕಾಮಗಾರಿ ಸುಮಾರು 17 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಹಾಗೂ ಇತರ ಕೆಲವೊಂದು ಕಾಮಗಾರಿಗಳಿಗಾಗಿ 10 ಕೋ.ರೂ. ಹೆಚ್ಚುವರಿ ಅನುದಾನ ಬಿಡುಗಡೆಯಾಗಿದೆ. ಇದೀಗ ಕಾಮಗಾರಿ ಆರಂಭವಾಗಿದೆ. ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಆರಂಭಕ್ಕೆ ಕನಿಷ್ಠ ನಾಲ್ಕು ತಿಂಗಳು ಅಗತ್ಯ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೊಳಿಸಲು ಸ್ಪೆಷಲ್ ಪರ್ಪಸ್ ವೆಹಿಕಲ್(ಎಸ್‌ಪಿವಿ)ಗಾಗಿ ಸಂಸ್ಥೆಯನ್ನು ಅಂತಿಮಗೊಳಿಸಲಾಗಿದೆ. ಎರಡು ದಿನಗಳಲ್ಲಿ ಸಂಸ್ಥೆಗೆ ವರ್ಕ್ ಆರ್ಡರ್ ಆಗಲಿದೆ. ಬಳಿಕ ಒಂದು ತಿಂಗಳಲ್ಲಿ ಪ್ರಥಮ ಸಭೆ ನಡೆಯಲಿದೆ. ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳಲು 3 ತಿಂಗಳು ಅಗತ್ಯವಿದೆ. ಒಟ್ಟಿನಲ್ಲಿ ಯೋಜನೆ ಕಾಮಗಾರಿ ಆರಂಭಗೊಳ್ಳಲು ಕನಿಷ್ಠ ನಾಲ್ಕು ತಿಂಗಳು ಬೇಕಾಗಬಹುದು ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮಾಹಿತಿ ನೀಡಿದರು.
ಅಪಘಾತಕ್ಕೀಡಾಗಿರುವ ವಾಹನಗಳ ತೆರವಿಗೆ ಆದೇಶ ಜಿಲ್ಲೆಯ ವಿವಿಧ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ಜಿಪಂ ರಸ್ತೆಗಳ ಇಕ್ಕೆಲಗಳಲ್ಲಿ ಅಪಘಾತ ಕ್ಕೀಡಾದ ವಾಹನಗಳಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಂತಹ ವಾಹನಗಳನ್ನು ತಕ್ಷಣ ತೆರವು ಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿ ಸಿದರು.
ಸಭೆಯಲ್ಲಿ ಶಾಸಕ ಅಭಯಚಂದ್ರ ಜೈನ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಸರ್ವೋತ್ತಮ ಗೌಡ, ಶಾಹುಲ್ ಹಮೀದ್, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ, ಜಿಪಂ ಸಿಇಒ ಡಾ.ಎಂ.ಆರ್.ರವಿ ಉಪಸ್ಥಿತರಿದ್ದರು.
ಐದು ಮನೆಗಳಿದ್ದರೂ ಟ್ಯಾಂಕರ್ ನೀರು ಪೂರೈಕೆ ಮಾಡಿ
ನೀರಿನ ಸಮಸ್ಯೆ ಇರುವಲ್ಲಿ ಕನಿಷ್ಠ ಐದು ಮನೆಗಳಿದ್ದರೂ ಅಂತಹ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಪೂರೈಕೆ ಮಾಡಬೇಕು. ನಗರದಲ್ಲಿ ಖಾಸಗಿ ಟ್ಯಾಂಕರ್‌ಗಳಲ್ಲಿ ಮನಬಂದಂತೆ ಹಣ ಪಡೆದು ನೀರು ಪೂರೈಕೆ ಮಾಡುತ್ತಿರುವ ದೂರುಗಳು ಬಂದಿವೆ. ಖಾಸಗಿ ಮೂಲಗಳಿಂದ ನೀರನ್ನು ಪಡೆದು ನಿರ್ಮಾಣ ಅಥವಾ ವಾಣಿಜ್ಯ ಬಳಕೆಗೆ ಪೂರೈಕೆ ಮಾಡಬಹುದೇ ಹೊರತು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಶುಲ್ಕ ವಿಧಿಸುವಂತಿಲ್ಲ. ಗ್ರಾಮೀಣ ಪ್ರದೇಶದ ಎಲ್ಲ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನಗರಾಡಳಿತಗಳ ಮುಖ್ಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
ಡಾ.ಕೆ.ಜಿ.ಜಗದೀಶ್, ಜಿಲ್ಲಾಧಿಕಾರಿ