×
Ad

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮಂಗಳೂರು ಚಲೋ: ಎಸ್‌ಡಿಪಿಐ

Update: 2017-04-07 00:14 IST

 ಪುತ್ತೂರು, ಎ.6: ಅಹ್ಮದ್ ಖುರೇಷಿ ಎಂಬ ಯುವಕನ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿ ಬಳಿ ಮಂಗಳವಾರ ಪಿಎಫ್‌ಐ ವತಿಯಿಂದ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ಅಮಾಯಕ ಪ್ರತಿಭಟನಾ ನಿರತರ ಮೇಲೆ ದೌರ್ಜನ್ಯ ನಡೆಸಿದ್ದು, ದೌರ್ಜನ್ಯ ನಡೆಸಿರುವ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಬೃಹತ್ ಮಂಗಳೂರು ಚಲೋ ನಡೆಸಲಾಗುವುದು ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಸಿದ್ದೀಕ್ ಎಚ್ಚರಿಸಿದ್ದಾರೆ. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಎಸ್ಸೈ ಐತ್ತಪ್ಪಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯನ್ನು ಎಸ್‌ಡಿಪಿಐ ಖಂಡಿಸುತ್ತದೆ. ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಐತ್ತಪ್ಪರ ಮೇಲೆ ನಡೆದ ಹಲ್ಲೆಯನ್ನೇ ದೊಡ್ಡದು ಮಾಡುವ ಮೂಲಕ ಪೊಲೀಸರು ಮೊನ್ನೆ ನಡೆಸಿದ ಲಾಠಿಚಾರ್ಜ್ ಮತ್ತು ಮಾನವ ಹಕ್ಕು ಉಲ್ಲಂಘನೆಯನ್ನು ಹಾದಿ ತಪ್ಪಿಸುವ ಉದ್ದೇಶ ನಡೆಯುತ್ತಿದೆ ಎಂದು ಆರೋಪಿಸಿದರು. ಅಹ್ಮದ್ ಖುರೇಷಿಯನ್ನು ವಾರಗಟ್ಟಲೆ ಪೊಲೀಸರು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ದೌರ್ಜನ್ಯ ನಡೆಸಿದ್ದರು. ಇದರಿಂದ ಅವರು ಕಿಡ್ನಿ ವೈಫಲ್ಯಕ್ಕೀಡಾಗಿದ್ದಾರೆ. ಇದನ್ನು ವೈದ್ಯಾಧಿಕಾರಿಗಳು ಘೋಷಿಸಿದ ಬಳಿಕ ಅಂದರೆ ಎ.2ರಂದು ಅವರಿಗೆ ಡಯಾಲಿಸಿಸ್ ಮಾಡಲಾಗಿದೆ. ಸಿಸಿಬಿ ಸಿಬ್ಬಂದಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ವತಃ ಖುರೇಷಿಯೇ ಹೇಳಿಕೆ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಆತನನ್ನು ಫಿಕ್ಸ್ ಮಾಡುವುದಾಗಿ ಪೊಲೀಸರು ಬೆದರಿಕೆ ಒಡ್ಡಿದ್ದನ್ನೂ ಹೇಳಿದ್ದಾರೆ. ಇದೊಂದು ಭಯಾನಕ ವಿದ್ಯಮಾನ. ಈ ಬಗ್ಗೆ ಈಗಾಗಲೇ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದೆ ಎಂದರು.

ಖುರೇಷಿ ಪ್ರಕರಣ ಖಂಡಿಸಿ ಮಂಗಳೂರು ಕಮಿಷನರೇಟ್ ಕಚೇರಿ ಎದುರು ಮುಸ್ಲಿಮ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಪ್ರತಿಭಟನಾಕಾರರ ಮೇಲೆ ಏಕಾಏಕಿ ಲಾಠಿ ಚಾರ್ಜ್ ಮಾಡಲಾಗಿದೆ. ಪ್ರತಿಭಟನಾಕಾರರೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು. ಇದರ ಸತ್ಯಾಸತ್ಯತೆಗಾಗಿ ಆ ಪ್ರತಿಭಟನೆಯ ಎಲ್ಲ ವೀಡಿಯೊ ತುಣುಕುಗಳನ್ನು ಖುದ್ದು ಪರಿಶೀಲಿಸಲಿ. ಲಾಠಿಚಾರ್ಜ್‌ನಲ್ಲಿ 65ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 9 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇದಾದ ಬಳಿಕವೂ ಪ್ರತಿಭಟನೆ ನಡೆಸಿದ ಮುಸ್ಲಿಮ್ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಖುರೇಷಿ ಕಿಡ್ನಿ ವೈಫಲ್ಯಕ್ಕೊಳಗಾಗುವಂತೆ ದೌರ್ಜನ್ಯ ನಡೆಸಿದ ಮತ್ತು ಪ್ರತಿಭಟನಾ ನಿರತರ ವಿರುದ್ಧ ಲಾಠಿ ಚಾರ್ಜ್ ನಡೆಸಿದಪೊಲೀಸರು ಕಾನೂನು ಮೀರಿ ನಡೆದಿ ದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಸಿಬಿ ಇನ್‌ಸ್ಪೆಕ್ಟರ್ ಸುನೀಲ್ ನಾಯ್ಕೆ ಮತ್ತು ಸಬ್ ಇನ್‌ಸ್ಪೆಕ್ಟರ್ ಶ್ಯಾಂ ಸುಂದರ್‌ಸೇರಿದಂತೆ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಯನ್ನು ತಕ್ಷಣ ಅಮಾನತು ಮಾಡಬೇಕು. ವಿಶೇಷ ತನಿಖಾ ತಂಡ ರಚಿಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ಇದಕ್ಕಾಗಿ ಸರಕಾರಕ್ಕೆ 15 ದಿನಗಳ ಗಡು ನೀಡಿದ್ದೇವೆ. ಇದಕ್ಕೆ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಉಪಾಧ್ಯಕ್ಷ ಇಬ್ರಾಹೀಂ ಸಾಗರ್, ಜತೆ ಕಾರ್ಯದರ್ಶಿ ಹಂಝ ಅಪ್ನಾನ್, ಕೋಶಾಧಿಕಾರಿ ಪಿ.ಬಿ.ಕೆ.ಮುಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News