ಎಂಡೋ ಸಂತ್ರಸ್ತರಿಗೆ ವರದಾನವಾಗುತ್ತಿರುವ ವೈದ್ಯಕೀಯ ಶಿಬಿರ
ಕಾಸರಗೋಡು, ಎ.6: ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಆಯೋಜಿಸಲಾಗುತ್ತಿರುವ ವೈದ್ಯಕೀಯ ಶಿಬಿರಗಳು ಸಂತ್ರಸ್ತರಿಗೆ ವರದಾನವಾಗಿ ಪರಿಣಮಿಸುತ್ತಿದೆ.
ಎಪ್ರಿಲ್ ಒಂಬತ್ತರ ತನಕ ಜಿಲ್ಲೆಯ ಎಂಡೋ ಸಂತ್ರಸ್ತ ವಲಯದ 11 ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತ್ರಸ್ತರಿಗಾಗಿ ಶಿಬಿರ ಆಯೋಜಿಸಲಾಗುತ್ತಿದೆ. ದಿನಂಪ್ರತಿ ನೂರಾರು ಸಂತ್ರಸ್ತರು ಶಿಬಿರದ ಪ್ರಯೋಜನ ಪಡೆಯುತ್ತಿದ್ದಾರೆ.
ಪನತ್ತಡಿ , ಕಳ್ಳಾರ್, ಕೋಡೋ ಬೆಳ್ಳೂರು, ಬಲಾಲ್, ವೆಸ್ಟ್ ಎಳೇರಿ, ಈಸ್ಟ್ ಎಳೇರಿ ಗ್ರಾಪಂ ವ್ಯಾಪ್ತಿಯವರಿಗೆ ರಾಜಪುರದಲ್ಲಿ ಗುರುವಾರ ಶಿಬಿರ ಆಯೋಜಿಸಲಾಗಿತ್ತು. ಇದರಲ್ಲಿ 625 ಎಂಡೋ ಸಂತ್ರಸ್ತ ರೋಗಿಗಳು ತಪಾಸಣೆಗೆ ಒಳಗಾದರು.
ವಿವಿಧ ವೈದ್ಯಕೀಯ ಕಾಲೇಜಿನ 38 ತಜ್ಞವೈದ್ಯರು ರೋಗಿಗಳ ತಪಾಸಣೆ ನಡೆಸಿದರು. ಹರತಾಳದ ಹಿನ್ನೆಲೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ಮುಂದಿನ ದಿನಗಳಲ್ಲಿ ಶಿಬಿರ ಆಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಪಿ.ರಾಜನ್, ಮುಹಮ್ಮದ್ ಆಶಿಲ್, ಎಂಡೋಸಲ್ಫಾನ್ ಪುನರ್ವಸತಿ ಸೆಲ್ನ ಸಿ.ಬಿಜು, ಡಾ.ರಾಮನ್ ಮೊದಲಾದವರು ಉಪಸ್ಥಿತರಿದ್ದರು. ಎ.7ರಂದು ಬದಿಯಡ್ಕ ಪೆರಡಾಲ ಸರಕಾರಿ ಶಾಲೆಯಲ್ಲಿ ವೈದ್ಯಕೀಯ ಶಿಬಿರ ನಡೆಯಲಿದೆ.