ಆಲ್ವಾರ್ ಪ್ರಕರಣ: ಆರೋಪಿಗಳ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚನೆ

Update: 2017-04-07 14:26 GMT

ಹೊಸದಿಲ್ಲಿ,ಎ.7: ಆಲ್ವಾರ್‌ನಲ್ಲಿ ಅಕ್ರಮ ಗೋಸಾಗಾಟದ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಯೋರ್ವನ ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ರಾಜಸ್ಥಾನ ಸರಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಶುಕ್ರವಾರ ಸಲ್ಲಿಸಿರುವ ತನ್ನ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.

 ಎ.1ರಂದು ಆಲ್ವಾರ್ ಜಿಲ್ಲೆಯಲ್ಲಿ ಗೋರಕ್ಷಕರ ಗುಂಪೊಂದು ಗೋಸಾಗಾಟಗಾರರನ್ನು ಥಳಿಸಿ, ವಾಹನಗಳಿಗೆ ಹಾನಿಯನ್ನುಂಟು ಮಾಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಪೈಕಿ ಪೆಹ್ಲು ಖಾನ್(55) ಎಂಬಾತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 ಈವರೆಗೆ ಮೂವರನ್ನು ಬಂಧಿಸಲಾಗಿದೆ. ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ವರದಿಯು ತಿಳಿಸಿದೆ. ಸದ್ರಿ ತಂಡವು ಉಳಿದ ಆರೋಪಿಗಳ ಬಂಧನಕ್ಕಾಗಿಯೂ ಪ್ರಯತ್ನಿಸಲಿದೆ ಎಂದು ಅದು ಹೇಳಿದೆ.

16 ಜನರು ಆರು ಪಿಕಪ್ ವಾಹನಗಳಲ್ಲಿ 36 ದನಗಳನ್ನು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ಅವರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ಶಂಕಿಸಿದ್ದ ಆಳ್ವಾರ್‌ನ ಬೆಹ್ರೂರು ಎಂಬಲ್ಲಿ ಕೆಲವು ಸ್ಥಳೀಯರು ಖಾನ್ ಮತ್ತು ಆತನ ಇಬ್ಬರು ಪುತ್ರರು ಸೇರಿದಂತೆ ಐವರನ್ನು ಬರ್ಬರವಾಗಿ ಥಳಿಸಿತ್ತು.

ಈ ಘಟನೆ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿತ್ತು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಸಂವಿಧಾನವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News