ದಕ್ಷಿಣ ಭಾರತೀಯರನ್ನು ಕಪ್ಪು ಮೈಬಣ್ಣದವರೆಂದು ಹೀಗಳೆದ ಬಿಜೆಪಿ ನಾಯಕ
ಹೊಸದಿಲ್ಲಿ,ಎ.7: ಬಿಜೆಪಿಯ ಮಾಜಿ ಸಂಸದ ತರುಣ್ ವಿಜಯ್ ದಕ್ಷಿಣ ಭಾರತೀಯರ ಬಗ್ಗೆ ನೀಡಿದ ಜನಾಂಗೀಯ ನಿಂದನೆಯ ಹೇಳಿಕೆ ಯೊಂದು ಭಾರೀ ವಿವಾದ ಎಬ್ಬಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರೇಟರ ನೊಯ್ಡದಲ್ಲಿ ಆಫ್ರಿಕನ್ ವಿದ್ಯಾರ್ಥಿಗಳ ಮೇಲೆ ಇತ್ತೀಚೆಗೆ ನಡೆದ ಜನಾಂಗೀಯ ದ್ವೇಷದ ಸರಣಿ ದಾಳಿಗಳ ಬಗ್ಗೆ ಅಲ್‌ಜಝೀರಾ ಸುದ್ದಿ ವಾಹಿನಿಯ ಆನ್‌ಲೈನ್ ಶೋ ‘ ದಿ ಸ್ಟ್ರೀಮ್’ನಲ್ಲಿ ನಡೆದ ಚರ್ಚಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ವಿಜಯ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘‘ ಒಂದು ವೇಳೆ ನಾವು ಜನಾಂಗೀಯವಾದಿಗಳಾಗಿದ್ದಲ್ಲಿ, ತಮಿಳುನಾಡು, ಕೇರಳ, ಕರ್ನಾಟಕ ಹಾಗೂ ಆಂಧ್ರಪ್ರದೇಶ ಹೀಗೆ ಇಡೀ ದಕ್ಷಿಣ ಭಾರತದ ಜನರೊಂದಿಗೆ ನಾವು ಯಾಕೆ ಬದುಕುತ್ತಿದ್ದೆವು?. ನಮ್ಮ ಸುತ್ತಲೂ ಕಪ್ಪು ಜನರಿದ್ದಾರೆ’’ ಎಂದು ಮಾಜಿ ಲೋಕಸಭಾ ಸದಸ್ಯರೂ ಆದ ವಿಜಯ್ ಹೇಳಿದ್ದರು.
ಆಫ್ರಿಕನ್ ಜನಾಂಗೀಯರ ಮೇಲೆ ಭಾರತದಲ್ಲಿ ನಡೆಯುತ್ತಿರುವ ಹಲ್ಲೆಗಳನ್ನು ನಿಲ್ಲಿಸಲು ಸರಕಾರಗಳು ಹೆಚ್ಚು ಪ್ರಯತ್ನಗಳನ್ನು ಮಾಡುತ್ತಿಲ್ಲವೆಂದು ಆಫ್ರಿಕನ್ ಸಂಘಟನೆಗಳ ಆಕ್ರೋಶಗಳ ನಡುವೆಯೇ ತರುಣ್ ಈ ಹೇಳಿಕೆ ನೀಡಿದ್ದಾರೆ. ಆದರೆ ಈ ಆರೋಪವನ್ನು ಕೇಂದ್ರ ಸರಕಾರ ಅಲ್ಲಗಳೆದಿದೆ.
ಈ ಮಧ್ಯೆ ತನ್ನ ಹೇಳಿಕೆ ವಿವಾದಕ್ಕೆ ಗ್ರಾಸವಾದ ಕಾರಣ ಎಚ್ಚೆತ್ತುಕೊಂಡ ವಿಜಯ್ ಟ್ವಿಟ್ಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ಭಾರತವು ಸಂಕೀರ್ಣವಾದ ಸಂಸ್ಕೃತಿಯನ್ನು ಹೊಂದಿದ್ದು, ಅದು ಕಪ್ಪು ಮೈಬಣ್ಣದ ಶ್ರೀಕೃಷ್ಣನನ್ನು ದೇವರೆಂದು ಪೂಜಿಸುತ್ತಿದೆ ಎಂದವರು ಹೇಳಿದ್ದಾರೆ. ‘‘ ನನ್ನ ಹೇಳಿಕೆಗಾಗಿ ವಿಷಾದಿಸುತ್ತೇನೆ. ನನ್ನ ಹೇಳಿದ್ದುದನ್ನು ಬೇರೆಯೇ ಆಗಿ ಭಾವಿಸಿದವರೊಂದಿಗೆ ನಾನು ಕ್ಷಮೆಯಾಚಿಸುತ್ತೇನೆ’’ ಎಂದವರು ಹೇಳಿದ್ದಾರೆ.
ಗ್ರೇಟರ್ ನೊಯ್ಡದಲ್ಲಿ ಹದಿಹರೆಯದ ಬಾಲಕನೊಬ್ಬ ಅತಿಯಾದ ಮಾದಕದ್ರವ್ಯ ಸೇವನೆಯಿಂದ ಮೃತಪಟ್ಟ ಘಟನೆಯ ಬಳಿಕ ಸ್ಥಳೀಯರು ನೈಜೀರಿಯನ್ ವಿದ್ಯಾರ್ಥಿಗಳ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮೃತ ಬಾಲಕನಿಗೆ ಆಫ್ರಿಕನ್ನರು ಡ್ರಗ್ಸ್‌ಗಳನ್ನು ಪೂರಅಐಕೆ ಮಾಡುತ್ತಿದ್ದಾರೆಂದು ಸ್ಥಳೀಯರು ಆಪಾದಿಸುತ್ತಾರೆ.