ಮಾಜಿ ಆರೆಸ್ಸೆಸ್ ಕಾರ್ಯಕರ್ತನ ಕೊಲೆ: 10 ಆರೆಸ್ಸೆಸಿಗರ ಬಂಧನ
ಚೆರ್ತಲ, ಎ.7: ಬುಧವಾರ ಇಲ್ಲಿ 17ರ ಹರೆಯದ ಮಾಜಿ ಆರೆಸ್ಸೆಸ್ ಕಾರ್ಯಕರ್ತನನ್ನು ಹತ್ಯೆಗೈದ ಆರೋಪದಲ್ಲಿ 10 ಆರೆಸ್ಸೆಸ್ ಕಾರ್ಯಕರ್ತರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಅನಂತು ಕೊಲೆಯಾಗಿರುವ ನತದೃಷ್ಟ. ಇಲ್ಲಿಯ ವಯಲಾರ್ ರಾಮ ವರ್ಮಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಅನಂತು ಈ ಹಿಂದೆ ಆಗಾಗ್ಗೆ ಆರೆಸ್ಸೆಸ್ ಶಾಖೆಗಳಿಗೆ ಹಾಜರಾಗುತ್ತಿದ್ದನಾದರೂ ಇತ್ತೀಚಿನ ದಿನಗಳಲ್ಲಿ ಅದರಿಂದ ದೂರವಿದ್ದ. ಇದು ಆತನ ಹತ್ಯೆಗೆ ಕಾರಣವಾಗಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಕೇಂದ್ರೀಕರಿಸಿದ್ದಾರೆ.
ವಯಲಾರ್ ರಾಮ ವರ್ಮಾ ಶಾಲೆಯಲ್ಲಿ ಎರಡು ಗುಂಪುಗಳ ನಡುವೆ ವೈಷಮ್ಯವಿದ್ದು, ಬುಧವಾರ ಬೆಳಿಗ್ಗೆ ಉದ್ವಿಗ್ನತೆಯನ್ನು ನಿವಾರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದರು. ಇದರ ಭಾಗವಾಗಿ ಪೊಲೀಸ್ ಠಾಣೆಯಲ್ಲಿ ಸಭೆಯೂ ನಡೆದಿತ್ತು. ಆದರೆ ಸಂಜೆ ವೇಳೆಗೆ ಪಟ್ಟನಕ್ಕಾಡ್‌ನ ನೀಲಿಮಂಗಲಂ ದೇವಸ್ಥಾನದ ಉತ್ಸವದ ಸಂದರ್ಭ ಉದ್ವಿಗ್ನತೆ ಮತ್ತೆ ಗರಿಗೆದರಿತ್ತು.
ಇದೇ ವೇಳೆ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅನಂತುವನ್ನು ಬೆನ್ನಟ್ಟಿದ್ದ ಗುಂಪು ಆತನನ್ನು ಥಳಿಸಿ ಕೊಂದುಹಾಕಿತ್ತು. ಇದು ಕೇರಳದಲ್ಲಿ ಕಳೆದೆರಡು ತಿಂಗಳುಗಳಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರ ಹತ್ಯೆಗಾಗಿ ಆರೆಸ್ಸೆಸ್/ಬಿಜೆಪಿ ಕಾರ್ಯಕರ್ತರ ಬಂಧನವಾಗಿರುವ ಎರಡನೇ ಪ್ರಕರಣವಾಗಿದೆ. ಕಳೆದ ಫೆಬ್ರವರಿಯಲ್ಲಿ ಮನ್ನುತಿ ದೇವಸ್ಥಾನದ ಉತ್ಸವದ ಸಂದರ್ಭ ಯುವಮೋರ್ಚಾದ ಕಾರ್ಯಕರ್ತ ನಿರ್ಮಲ್(20) ಎಂಬಾತನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು .ಇದನ್ನು ವಿರೋಧಿಸಿ ಬಿಜೆಪಿ ಹರತಾಳವನ್ನೂ ನಡೆಸಿತ್ತು. ಆದರೆ ನಿರ್ಮಲ್ ಹತ್ಯೆಯಲ್ಲಿ ಐವರು ಬಿಜೆಪಿ ಕಾರ್ಯಕರ್ತರೇ ಭಾಗಿಯಾಗಿದ್ದರು ಎನ್ನುವುದು ನಂತರ ಬೆಳಕಿಗೆ ಬಂದಿತ್ತು.