×
Ad

15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

Update: 2017-04-07 20:57 IST

ಉಡುಪಿ, ಎ.7: ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಚೂರಿಕೊಡ್ಲುವಿನ ಬಾಬು ಆಚಾರ್ ಎಂಬವರ ಮನೆಯ ಪಕ್ಕದ ಅಡಿಕೆ ತೋಟದಲ್ಲಿ ಗುರುವಾರ ಸಂಜೆ ವೇಳೆ ಕಾಣಿಸಿಕೊಂಡ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.

ತೋಟದಲ್ಲಿ ಕೆಲಸಕ್ಕೆಂದು ಹೋದಾಗ ಬೃಹತ್ ಗಾತ್ರದ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಕೂಡಲೇ ಅರಣ್ಯಾಧಿಕಾರಿಗಳಿಗೆ ಕರೆ ಕಳುಹಿಸಿದ್ದು, ಇಲಾಖೆಯ ಕೃಷ್ಣ ಆಚಾರ್ ಎಂಬವರು ಕಾಳಿಂಗವನ್ನು ಸುರಕ್ಷಿತವಾಗಿ ಹಿಡಿದು ಅಜ್ರಿಯ ರಕ್ಷಿತಾರಣ್ಯದಲ್ಲಿ ಬಿಟ್ಟು ಬಂದರು.

ನಾಗರಹಾವಿನ ರಕ್ಷಣೆ:

ಇಲಿಯ ಬೇಟೆಗೆಂದು ಬಂದು ಬಾವಿಗೆ ಬಿದ್ದಿದ್ದ ನಾಗರಹಾವೊಂದನ್ನು ಉರಗ ತಜ್ಞ ಗುರುರಾಜ್ ಸನಿಲ್ ಉಡುಪಿ ಸಮೀಪದ ಕಡೆಕಾರು ಗ್ರಾಮದ ಕುತ್ಪಾಡಿಯಲ್ಲಿ ರಕ್ಷಿಸಿದ್ದಾರೆ.

ಇಲಿಯನ್ನು ಬೆನ್ನಟ್ಟಿಕೊಂಡು ಬಂದ ನಾಗರಹಾವು ಅಂಜಗುಡ್ಡೆಯ ಕಿಟ್ಟಿ ಪೂಜಾರಿ ಅವರ 20 ಅಡಿ ಆಳದ ನೀರಿರುವ ಬಾವಿಗೆ ಆಯ ತಪ್ಪಿ ಬಿದ್ದಿತ್ತು. ನೀರಿನಿಂದ ಮೇಲೆ ಬರಲಾಗದೇ, ಬೇರೆಲ್ಲೂ ನಿಲ್ಲಲು ಅವಕಾಶ ಸಿಗದೇ ಎರಡು ದಿನಗಳ ಕಾಲ ಅದು ನೀರಿನಲ್ಲೇ ತೇಲುತ್ತಿತ್ತು.

ಕೊನೆಗೆ ಅದನ್ನು ನೋಡಿದ ಮನೆಯವರು ಉಡುಪಿಯ ಉರಗತಜ್ಞ ಗುರುರಾಜ್ ಸನಿಲ್‌ಗೆ ಕರೆ ಕಳುಹಿಸಿದರು. ಅವರು ಬಾವಿಯೊಳಗೆ ಕೋಲು ಹಾಕಿ ಅದಕ್ಕೆ ಸಿಕ್ಕಿಸಿದ್ದ ಕೊಕ್ಕೆಗೆ ನಾಗರಹಾವು ಸಿಲುಕುವಂತೆ ಮಾಡಿ, ನಿಧಾನವಾಗಿ ಅದನ್ನು ಮೇಲಕ್ಕೆ ತಂದರು. ಮೇಲಕ್ಕೆ ಬಂದ ಹಾವನ್ನು ಉಪಚರಿಸಿ ಸುರಕ್ಷಿತ ಜಾಗದಲ್ಲಿ ಬಿಟ್ಟುಬಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News