×
Ad

ಶಿವಸೇನೆಯ ಸಂಸದನ ಮೇಲಿದ್ದ ವಿಮಾನಯಾನ ನಿರ್ಬಂಧ ತೆರವು

Update: 2017-04-07 21:00 IST

  ಹೊಸದಿಲ್ಲಿ, ಎ.7: ವಿಮಾನಯಾನ ಸಚಿವಾಲಯದ ಒತ್ತಡಕ್ಕೆ ಮಣಿದಿರುವ ಏರ್ ಇಂಡಿಯಾ , ವಿಮಾನ ಯಾನದ ವೇಳೆ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಶಿವಸೇನೆಯ ಸಂಸದ ರವೀಂದ್ರ ಗಾಯಕ್‌ವಾಡ್ ಅವರ ಮೇಲಿದ್ದ ವಿಮಾನಯಾನ ನಿರ್ಬಂಧವನ್ನು ತೆರವುಗೊಳಿಸಿದೆ.

ಇತರ ಐದು ವಿಮಾನಯಾನ ಸಂಸ್ಥೆಗಳೂ ಇದೇ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಅದಾಗ್ಯೂ, ಗಾಯಕ್‌ವಾಡ್ ಲಿಖಿತರೂಪದಲ್ಲಿ ಕ್ಷಮಾಪಣೆ ಕೇಳಿದರೆ ಮಾತ್ರ ಅವರ ಮೇಲಿರುವ ವಿಮಾನಯಾನ ನಿರ್ಬಂಧ ತೆರವುಗೊಳಿಸುವುದಾಗಿ ಏರ್ ಇಂಡಿಯಾ ಪೈಲಟ್‌ಗಳ ಯೂನಿಯನ್ ಆಗಿರುವ ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘಟನೆ ತಿಳಿಸಿದೆ.

 ವಿಮಾನಯಾನ ಸಚಿವಾಲಯದ ನಿರ್ದೇಶನದ ಮೇರೆಗೆ ಗಾಯಕ್‌ವಾಡ್ ಮೇಲಿದ್ದ ವಿಮಾನಯಾನ ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ಸರಕಾರೀ ಸಂಸ್ಥೆಯಾಗಿರುವ ಇಂಡಿಯನ್ ಏರ್‌ಲೈನ್ಸ್‌ನ ಅಧಿಕಾರಿಯೋರ್ವರು ತಿಳಿಸಿದ್ದಾರೆ. ವಾಯುಯಾನ ಸಚಿವ ಅಶೋಕ್ ಗಜಪತಿರಾಜು ಅವರಿಗೆ ಬರೆದಿರುವ ಪತ್ರದಲ್ಲಿ ಗಾಯಕ್‌ವಾಡ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ ಅವರು ಕ್ಷಮಾಪಣೆ ಕೇಳಿರಲಿಲ್ಲ.

ತನ್ನ ನಡವಳಿಕೆ ಮುಂದಿನ ದಿನಗಳಲ್ಲಿ ಮತ್ತೆ ಮರುಕಳಿಸಬಹುದು ಎಂಬ ಭಾವನೆ ಸರಿಯಲ್ಲ. ಪ್ರಕರಣದ ಬಗ್ಗೆ ಇದೀಗ ಸಾಗುತ್ತಿರುವ ತನಿಖೆ ವಾಸ್ತವ ಸಂಗತಿಯನ್ನು ಅನಾವರಣಗೊಳಿಸಲಿದೆ ಎಂದು ಗಾಯಕ್‌ವಾಡ್ ಸಚಿವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದರು.

  ಈ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಶಿವಸೇನೆಯ ಸಂಸದರು ಭಾರೀ ಗದ್ದಲ ಎಬ್ಬಿಸಿದ್ದರು. ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆ, ಮುಂಬೈಯಿಂದ ಹೊರಡುವ ಎಲ್ಲಾ ವಿಮಾನಯಾನಗಳ ಸಂಚಾರವನ್ನು ತಡೆಹಿಡಿಯುವುದಾಗಿ ಮತ್ತು ಎನ್‌ಡಿಎ ಸಭೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಒಡ್ಡಿತ್ತು.

 ವಾಯುಯಾನದ ಮೇಲೆ ನಿರ್ಬಂಧ ಹೇರಿದ ಪರಿಣಾಮ ಗುರುವಾರ ನಡೆದ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಗಾಯಕ್‌ವಾಡ್ ಬಾಡಿಗೆ ವಿಮಾನದಲ್ಲಿ ಪ್ರಯಾಣಿಸ ಬೇಕಾಯಿತು. ಈ ಹಿನ್ನೆಲೆಯಲ್ಲಿ , ನಿರ್ಬಂಧ ತೆರವುಗೊಳಿಸುವಂತೆ ಸಚಿವ ರಾಜು ಏರ್‌ಇಂಡಿಯಾ ಸಂಸ್ಥೆಗೆ ಪತ್ರ ಬರೆದಿದ್ದರು.

  ಆದರೆ ಗಾಯಕ್‌ವಾಡ್ ಬೇಷರತ್ ಕ್ಷಮಾಪಣೆ ಕೇಳುವವರೆಗೆ ಅವರ ಮೇಲಿನ ವಿಮಾನಯಾನ ನಿರ್ಬಂಧ ತೆರವು ಸರಿಯಲ್ಲ ಎಂದು ಏರ್‌ಇಂಡಿಯಾ ಕ್ಯಾಬಿನ್ ಸಿಬ್ಬಂದಿಗಳ ಸಂಘ ಪ್ರತಿಕ್ರಿಯೆ ನೀಡಿದೆ. ನಿರ್ಬಂಧ ತೆರವುಗೊಳಿಸುವ ಸಚಿವಾಲಯದ ಅಥವಾ ಸಂಸತ್ತಿನ ನಿರ್ಧಾರವು ಸಂಸ್ಥೆಯ ಸಿಬ್ಬಂದಿಗಳ ಮನೋಬಲವನ್ನು ಕುಗ್ಗಿಸುತ್ತದೆ ಎಂದು ಏರ್‌ಇಂಡಿಯಾ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಅಶ್ವನಿ ಲೊಹಾನಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

    ಗಾಯಕ್‌ವಾಡ್ ಬೇಷರತ್ ಕ್ಷಮೆ ಕೇಳಬೇಕು. ಅಲ್ಲದೆ ಚಿಕಾಗೊ ಮತ್ತು ಟೋಕಿಯೊ ಸಮ್ಮೇಳನದ ತೀರ್ಮಾನಕ್ಕೆ ಬದ್ಧರಿರುವುದಾಗಿ ಮತ್ತು ವಾಯುಯಾನ ನಿಯಮ ಪಾಲಿಸುವುದಾಗಿ ಲಿಖಿತ ರೂಪದಲ್ಲಿ ಪ್ರಮಾಣೀಕರಿಸಬೇಕು. ವಿಮಾನದ ಸಿಬ್ಬಂದಿಗಳ ರಕ್ಷಣೆ ಮತ್ತು ಸಾರ್ವಜನಿಕ ನಡವಳಿಕೆಯ ಸಂಸ್ಕಾರವನ್ನು ಪಾಲಿಸುವುದಾಗಿ ಭರವಸೆ ನೀಡದ ಹೊರತು ಅವರ ಮೇಲಿನ ನಿರ್ಬಂಧ ಸಡಿಲಿಕೆ ಸಲ್ಲದು. ರವೀಂದ್ರ ಗಾಯಕ್‌ವಾಡ್ ವಿಮಾನ ಯಾನಕ್ಕೆ ಹಾಗೂ ವಿಮಾನದ ಸಿಬ್ಬಂದಿಗಳ ಸುರಕ್ಷತೆಗೆ ಗಂಡಾಂತರವಾಗಿದ್ದಾರೆ. ಅವರನ್ನು ‘ಕಿರುಬೆರಳಿಗೂ ಒಂದು ಸಣ್ಣ ನೋವು’(ಕನಿಷ್ಠ ಕ್ಷಮಾಪಣೆ ಕೇಳದೆ) ಮಾಡದೆ ಬಿಟ್ಟರೆ ಅದೊಂದು ನಾಚಿಕೆಗೇಡಿನ ವಿಷಯವಾಗಿದೆ. ಆದ್ದರಿಂದ ಅವರ ಮೇಲಿರುವ ವಿಮಾನಯಾನ ನಿಷೇದ ತೆರವುಗೊಳಿಸುವ ಮೊದಲು ಸರಕಾರ ಯೋಚಿಸಬೇಕು ಎಂದು ಸಂಘ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News