×
Ad

ಉದ್ಯೋಗಿಗಳೊಂದಿಗೆ ಸೌಹಾರ್ದದಿಂದ ಉದ್ಯಮದ ಪ್ರಗತಿ: ಡಾ.ಆಸ್ಟಿನ್ ಪ್ರಭು

Update: 2017-04-07 21:24 IST

ಮಂಗಳೂರು, ಎ. 7: ಉದ್ಯಮಿಗಳು ತಮ್ಮ ಉದ್ಯೋಗಿಗಳನ್ನು ಉದ್ಯಮದ ಒಂದು ಭಾಗವಾಗಿ ತೆಗೆದುಕೊಂಡು ಅವರೊಂದಿಗೆ ವಿನಯನಯದಿಂದ ಬೆರೆತಾಗ ಉದ್ಯಮದ ಪ್ರಗತಿಯಾಗುತ್ತದೆ. ಸಿಬ್ಬಂದಿಯೊಂದಿಗೆ ಮಾಲಕರ ಸಂಬಂಧ ಅತ್ಯುತ್ತಮವಿದ್ದಾಗ ಮನಸ್ತಾಪ ಕಡಿಮೆಯಾಗಿ ಸೌಹಾರ್ದ ಏರ್ಪಟ್ಟು ಉತ್ಪಾದನೆ ಹೆಚ್ಚಾಗುತ್ತದೆ. ಇಂತಹ ಸಂಬಂಧದಿಂದ ಉದ್ಯಮದ ಮಾತ್ರವಲ್ಲದೆ ಸಮಾಜ ಮತ್ತು ನಾಡಿನ ಉನ್ನತಿಯಾಗುತ್ತದೆ ಎಂದು ಅಮೆರಿಕಾದ ಚಿಕಾಗೊ ನಿವಾಸಿ, ಉದ್ಯಮಾಡಳಿತ ತಜ್ಞ ಹಾಗೂ ಲಯನ್ಸ್ ಸಂಘಟನೆಯ ಅಂತಾರಾಷ್ಟ್ರೀಯ ತರಬೇತುದಾರ ಮಂಗಳೂರು ಮೂಲದ ಡಾ.ಆಸ್ಟಿನ್ ಡಿಸೋಜಾ ಪ್ರಭು ಹೇಳಿದ್ದಾರೆ.

ಅವರು ನಗರದ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ಸಭಾಭವನದಲ್ಲಿ ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಏರ್ಪಡಿಸಿದ ಱಟಾಪ್ ಮ್ಯಾನೇಜ್‌ಮೆಂಟ್ ರಿಸೋರ್ಸ್ - ಎಂಪ್ಲಾಯೀಸ್‌ೞಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

  ಉದ್ಯೋಗಿಗಳು ಉದ್ಯಮದ ಪ್ರಮುಖ ಸಂಪನ್ಮೂಲವಾಗಿರುತ್ತಾರೆ. ಅವರನ್ನು ಅಗೌರವದಿಂದ ಕಂಡರೆ ಉದ್ಯಮದ ಅವನತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಉದ್ಯೋಗಿಗಳ ಕ್ಷೇಮಸಮಾಚಾರ, ತರಬೇತಿ ಮತ್ತಿತರ ವಿಚಾರಗಳ ಕುರಿತು ಮಾಡುವ ಖರ್ಚು ನಷ್ಟವಲ್ಲ. ಬದಲಾಗಿ ಅದು ಪರೋಕ್ಷ ಲಾಭ ತಂದುಕೊಡುತ್ತದೆ. ಉದ್ಯೋಗಿಗಳನ್ನು ಪ್ರೋತ್ಸಾಹಿಸಿ ಹುರಿದುಂಬಿಸುವುದು ಮತ್ತು ಅವರ ಉತ್ತಮ ಕಾರ್ಯಗಳನ್ನು ಗುರುತಿಸುವುದು ಉದ್ಯಮ ಯಶಸ್ಸು ಗಳಿಸಲು ಸಹಾಯಕಾರಿಯಾಗುತ್ತದೆ ಎಂದರು.

ಚಿಕಾಗೊದ ಡೆಲ್‌ಟ್ರೋಲ್ ಫ್ಲುಯಿಡ್ ಪ್ರಾಡಕ್ಟ್ಸ್ ಕಂಪೆನಿಯಲ್ಲಿ ಮಹಾ ಪ್ರಬಂಧಕರಾಗಿದ್ದು, ನಿವೃತ್ತರಾಗಿರುವ ಡಾಆಸ್ಟಿನ್ ಅವರು ತಮ್ಮ ಸ್ವ-ಅನುಭವದ ದೃಷ್ಟಾಂತಗಳ ಸಹಿತ ವಿವರಿಸಿದರು.

 ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಉದ್ಯಮಾಡಳಿತ ಸ್ನಾಕೋತ್ತರ ಕೇಂದ್ರದ ನಿರ್ದೇಶಕ ಡಾ.ದೇವರಾಜ್ ಕೆ. ಅವರು ಡಾ.ಆಸ್ಟಿನ್ ಅವರ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಅಮೆರಿಕಾದ ಪ್ರಸ್ತುತ ಅಧ್ಯಕ್ಷರ ಆಡಳಿತದಡಿ ಭಾರತೀಯರ ಕುರಿತ ಅವಗಣನೆ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಅಸೋಸಿಯೇಶನ್‌ನ ಅಧ್ಯಕ್ಷ ಎಂ. ಆರ್. ವಾಸುದೇವ ಅವರು ಡಾ.ಆಸ್ಟಿನ್ ಅವರ ಬಹುಮುಖ ಪ್ರತಿಭೆಗಳ ಬಗ್ಗೆ ಕೊಂಡಾಡಿದರು. ಆರಂಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಜೆ.ಜಿ. ಅಂಚನ್ ಸ್ವಾಗತಿಸಿದರು. ಆಜೀವ ಸದಸ್ಯ ಎಚ್. ಆರ್.ಆಳ್ವ ಪರಿಚಯಿಸಿದರು. ಪ್ರಸನ್ನ ಮಲ್ಯ ವಂದಿಸಿದರು. ಮಂಗಳೂರು ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಕನ್ಸೆಪ್ಟಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News