×
Ad

ಸರಕಾರಿ ಶಾಲೆಗಳಲ್ಲಿ ಅನಧಿಕೃತ ಶಾಲಾ ಪೂರ್ವ ಶಿಕ್ಷಣ ವಿರೋಧಿಸಿ ಅಂಗನವಾಡಿ ನೌಕರರಿಂದ ಧರಣಿ

Update: 2017-04-07 21:48 IST

ಉಡುಪಿ, ಎ.7: ಉಡುಪಿ ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅನಧಿಕೃತ ಶಾಲಾ ಪೂರ್ವ ಶಿಕ್ಷಣ (ಆಂಗ್ಲ ಮಾಧ್ಯಮ) ನಡೆಸುತ್ತಿರುವುದನ್ನು ವಿರೋಧಿಸಿ ಮತ್ತು ಜಿಲ್ಲಾಧಿಕಾರಿಗಳ ಮೇಲೆ ಮರಳು ಮಾಫಿಯಾ ನಡೆಸಿರುವ ಕೊಲೆಯತ್ನವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನ ವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.

 ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರ ಸಹಕಾರ ದೊಂದಿಗೆ ಅನಧಿಕೃತವಾಗಿ 3-6ವರ್ಷದೊಳಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣವನ್ನು ನೀಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಂದ 6ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಸರಕಾರಕ್ಕೆ ನೀಡಿದ್ದು, ಸಂಖ್ಯೆಗೆ ಅನುಗುಣವಾಗಿ ಪೌಷ್ಠಿಕ ಆಹಾರ ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಈ ವರ್ಷದಿಂದ ಮಕ್ಕಳಿಗೆ ವಾರದ ಎಲ್ಲ ದಿನ ಹಾಲು, ಮೊಟ್ಟೆಗಳನ್ನು ವಿತರಿಸಲು ಉದ್ದೇಶಿಸಿದೆ. ಸರಕಾರಿ ಶಾಲೆಗಳಲ್ಲಿ 0-6ವರ್ಷದ ಮಕ್ಕಳನ್ನು ದಾಖಲಿಸಿಕೊಂಡರೆ ಶಾಲಾ ವ್ಯಾಪ್ತಿಯ 10-12 ಅಂಗನವಾಡಿ ಕೇಂದ್ರಗಳ ಮಕ್ಕಳು ಪೌಷ್ಠಿಕ ಆಹಾರದಿಂದ ವಂಚಿತ ರಾಗುತ್ತಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ಆರೋಪಿಸಿದ್ದಾರೆ.

ಆದುದರಿಂದ ಸರಕಾರ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್‌ಕೆಜಿ, ಯುಕೆಜಿ ಆಂಗ್ಲ ಮಾಧ್ಯಮ ಶಿಕ್ಷಣ ವಿಸ್ತರಿಸಲು ಕ್ರಮ ತೆಗೆದುಕೊಳ್ಳಬೇಕು. ಕಾರ್ಯಕರ್ತೆ ಸಹಾಯಕಿಯರಿಗೆ ಕಾಲಕಾಲಕ್ಕೆ ಸೂಕ್ತವಾದ ತರಬೇತಿ ನೀಡ ಬೇಕು. ಇಲಾಖೆಯಿಂದ ಉತ್ತಮ ಗುಣಮಟ್ಟದ ಪಠ್ಯಪುಸ್ತಕ ಪರಿಕರಗಳು, ಆಟಿಕೆಗಳನ್ನು ನೀಡಬೇಕು. ಇಲಾಖೆಯಿಂದ ಸಮವಸ್ತ್ರ ಶೂಗಳನ್ನು ಒದಗಿಸ ಬೇಕು ಎಂದು ಅವರು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಮೂಲಕ ಮುಖ್ಯ ಮಂತ್ರಿಗಳಿಗೆ ಈ ಕುರಿತ ಮನವಿಯನ್ನು ಸಲ್ಲಿಸಲಾಯಿತು. ಸಮಿತಿಯ ಜಿಲ್ಲಾಧ್ಯಕ್ಷೆ ಗೀತಾ ಶೆಟ್ಟಿ, ಪದಾಧಿಕಾರಿಗಳಾದ ಜಯಲಕ್ಷ್ಮಿ ಎಸ್.ಶೆಟ್ಟಿ, ಶೈಲಾ ಸಾಸ್ತಾನ, ತಾರಾ ಕೋಟ್ಯಾನ್, ಶಂಕುಂತಳಾ ಹಿರೇಬೆಟ್ಟು, ವಾಣಿ ಪಡುಬಿದ್ರಿ, ಸಿಐಟಿಯು ಮುಖಂಡರಾದ ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಕವಿವಾರ್ ಮೊದಲಾದವರು ಉಪಸ್ಥಿತರಿದ್ದರು.

ಬೆಂಗಳೂರು ಚಲೋ ಎಚ್ಚರಿಕೆ

ರಾಜ್ಯ ಮುಖ್ಯಮಂತ್ರಿ ನೀಡಿದ ಭರವಸೆಯಂತೆ ಅಂಗನವಾಡಿ ನೌಕರರಿಗೆ ಎ.10ರಂದು ವೇತನ ಹೆಚ್ಚಳ ಘೋಷಣೆ ಮಾಡದೆ ಮಾತಿಗೆ ತಪ್ಪಿದರೆ ಎ.11 ರಿಂದ ಮತ್ತೆ ವಿಧಾನಸೌಧ ಚಲೋ ನಡೆಸಲು ಸಂಘಟನೆಯ ರಾಜ್ಯ ಸಮಿತಿ ನಿರ್ಧರಿಸಿದೆ ಎಂದು ಜಿಲ್ಲಾಧ್ಯಕ್ಷೆ ಗೀತಾ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News