×
Ad

' ರೈಲ್ವೆ ಚಿಲ್ಡ್ರನ್‌ ' ಮನೋಹರ್‌ಗೆ ಬಾಲನಟ ಪ್ರಶಸ್ತಿ

Update: 2017-04-07 22:05 IST

ಉಡುಪಿ, ಎ.7: ಉಡುಪಿ ಮೂಲದ ಸರಕಾರೇತರ ಸಂಸ್ಥೆ 'ಟಿನ್‌ಡ್ರಮ್ ಬೀಟ್ಸ್‌' ಕ್ಲೌಡ್ ಫಂಡಿಂಗ್ ತತ್ವದ ಮೂಲಕ ನಿರ್ಮಿಸಿದ ಚೊಚ್ಚಲ ಕನ್ನಡ ಚಲನಚಿತ್ರ 'ರೈಲ್ವೆ ಚಿಲ್ಡ್ರನ್‌' ನಲ್ಲಿ ನಟಿಸಿದ ಬೆಂಗಳೂರು ಮೂಲದ ಮನೋಹರ್ ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿಗೆ ಬಾಜನನಾಗಿದ್ದಾನೆ.

 ರೈಲುಗಳ ಮೂಲಕ ಮನೆಯಿಂದ ಓಡಿಹೋಗುವ ಮಕ್ಕಳ ಕುರಿತಂತೆ ತಯಾರಿಸಲಾದ 'ರೈಲ್ವೆ ಚಿಲ್ಡ್ರನ್‌' ಚಿತ್ರವನ್ನು ಸಾರ್ವಜನಿಕರಿಂದ ದೇಣಿಗೆ ಪಡೆದು ಸುಮಾರು 40 ಲಕ್ಷ ರೂ.ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಎರಡು ಗಂಟೆಗಳ ಈ ಪೂರ್ಣಪ್ರಮಾಣದ ಚಿತ್ರವನ್ನು ನಿರ್ಮಾಪಕರಲ್ಲಿ ಪ್ರಮುಖ ಉಡುಪಿಯವರು ಎಂಬುದು ವಿಶೇಷ.

  ಉಡುಪಿಯ ಬಿರ್ತಿ ಗಂಗಾಧರ್, ಚೇತನ್ ಮಂಗಳೂರು ಹಾಗೂ ಲಯನ್ ವಿ.ಜಿ.ಶೆಟ್ಟಿ ಈ ಚಿತ್ರದ ಪ್ರಮುಖ ಪಾಲುದಾರರು. ಪೃಥ್ವಿ ಕೊಣನೂರು ಚಿತ್ರದ ನಿರ್ದೇಶಕರಾಗಿದ್ದಾರೆ. ಚಿತ್ರವನ್ನು ಲಲಿತಾ ಅಯ್ಯರ್ ಅವರ 'ರಿಸ್ಕೂಯಿಂಗ್ ರೈಲ್ವೆ ಚಿಲ್ಡ್ರನ್‌' ಪುಸ್ತಕದ ಆಧಾರದಲ್ಲಿ ನಿರ್ಮಿಸಲಾಗಿದೆ. ಚಿತ್ರವನ್ನು ಮುಂದಿನ ಮೇ ಅಥವಾ ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಆಲೋಚನೆ ಸಂಸ್ಥೆಗಿದೆ.

 ಭಾರತದಲ್ಲಿ ಪ್ರತಿ ವರ್ಷ ಸುಮಾರು ಒಂದು ಲಕ್ಷ ಮಕ್ಕಳು ರೈಲುಗಳ ಮೂಲಕ ಮನೆ ಬಿಟ್ಟು ಓಡಿ ಹೋಗುತಿದ್ದು, ಅವರು ದಿಲ್ಲಿ, ಹೈದರಾಬಾದ್ ಹಾಗೂ ಉತ್ತರ ಭಾರತದ ವಿವಿದೆಡೆಗಳಲ್ಲಿ ಕಾರ್ಯಾಚರಿಸುವ ಗ್ಯಾಂಗ್‌ಗಳ ಪಾಲಾಗಿ ವಿವಿಧ ರೀತಿಯ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗವಹಿಸುತಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಇಂಥ ಮಕ್ಕಳನ್ನು ರಕ್ಷಿಸುವ ಹಲವು ಸರಕಾರೇತರ ಸಂಸ್ಥೆಗಳು ಬೆಂಗಳೂರು ಸೇರಿದಂತೆ ವಿವಿದೆಡೆ ಕಾರ್ಯಾಚರಿಸುತಿದ್ದು ಬೆಂಗಳೂರಿನ 'ಸಾಥಿ' ಇಂಥ ಎನ್‌ಜಿಓಗಳಲ್ಲಿ ಒಂದು.

 ಪ್ರಮುಖವಾಗಿ ಇಬ್ಬರು ಮಕ್ಕಳನ್ನು ಆಧಾರವಾಗಿಟ್ಟುಕೊಂಡು ಇಂಥ ಮಕ್ಕಳ ಕರುಣಾಜನಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಇವುಗಳಲ್ಲಿ ಒಂದು ಪಾತ್ರವನ್ನು ಮನೋಹರ್ ನಿರ್ವಹಿಸಿದ್ದು, ಆತನ ಪಾತ್ರಕ್ಕೆ ಇದೀಗ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪಾತ್ರಕ್ಕೆ ಸೂಕ್ತ ಮಕ್ಕಳ ತಲಾಶೆಯಲ್ಲಿ ಈತ ಬೆಂಗಳೂರಿನಲ್ಲಿ ತಂಡಕ್ಕೆ ಸಿಕ್ಕಿದ್ದ. ಯಾವುದೇ ತರಬೇತಿ ಇಲ್ಲದೇ ಆತನ ಅದ್ಭುತ, ಸಹಜ ಅಭಿನಯಕ್ಕೆ ಚಿತ್ರ ತಂಡ ದಂಗಾಗಿದ್ದು, ಆತನಿಗೆ ಪ್ರಶಸ್ತಿಯನ್ನು ನಿರೀಕ್ಷಿಸಿತ್ತು ಎಂದು ಚಿತ್ರ ತಂಡದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದ ವಿಷ್ಣುಮೂರ್ತಿ ತಿಳಿಸಿದ್ದಾರೆ.

 ರಿಸರ್ವೇಷನ್‌ಗೂ ಜಿಲ್ಲೆಯ ನಂಟು:

ಈ ಬಾರಿ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಯನ್ನು ಕನ್ನಡಕ್ಕಾಗಿ ಪಡೆದ ಱರಿಸರ್ವೇಶನ್‌ೞಚಿತ್ರಕ್ಕೂ ಉಡುಪಿ ಜಿಲ್ಲೆಯೊಂದಿಗೆ ನಂಟಿದೆ. ಜಾತಿ ಹಾಗೂ ಮೀಸಲಾತಿಯ ತಲ್ಲಣಗಳನ್ನು ತೆರೆದಿಡುವ ಈ ಚಿತ್ರದಲ್ಲಿ ಕುಂದಾಪುರ ಕನ್ನಡದ ಸೊಗಡು ಧಾರಾಳವಾಗಿದೆ.

ಗುಲ್ವಾಡಿ ಟಾಕೀಸ್ ಬ್ಯಾನರ್‌ನಡಿ ನಟ, ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ ಈ ಚಿತ್ರವನ್ನು ನಿರ್ಮಿಸಿದ್ದು, ನಿಖಿಲ್ ಮಂಜು ನಿರ್ದೇಶಿಸಿದ್ದರು. ಶ್ರೀಲಲಿತೆ ಅವರ ಕಥೆಯಾದರಿಸಿದ ಈ ಚಿತ್ರದ ನಾಯಕಿ, ಕನ್ನಡ ಖ್ಯಾತ ಸಾಹಿತಿ, ವಿಮರ್ಶಕ ಮುರಳೀಧರ ಉಪಾಧ್ಯ ಹಿರಿಯಡಕ ಇವರ ಪುತ್ರಿ ಮಾನಸಿ ಸುಧೀರ್. ಬಿ.ಶಿವಾನಂದ್ ಚಿತ್ರದ ಸಂಭಾಷಣೆ ಬರೆದಿದ್ದು, ಸಮೀರ್ ಸಂಗೀತ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News