ಅಕ್ರಮ ಮರಳುಗಾರಿಕೆ: ಐವರು ಕಾರ್ಮಿಕರ ಗಡಿಪಾರು
Update: 2017-04-07 22:57 IST
ಕುಂದಾಪುರ, ಎ.7: ಅಕ್ರಮ ಮರಳುಗಾರಿಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ರಾಜ್ಯದ ಐವರು ಕಾರ್ಮಿಕರನ್ನು ಉಡುಪಿ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಕುಂದಾಪುರ ಕಂಡ್ಲೂರು ಸಮೀಪದ ಸಬ್ಲಾಡಿ ಹಟ್ಟಿಕುದ್ರು ಎಂಬಲ್ಲಿ ಮರಳು ಗಾರಿಕೆಗೆ ಸಹಾಯ ಮಾಡುತ್ತಿದ್ದ ಉತ್ತರ ಪ್ರದೇಶ ರಾಜ್ಯದ ನವಾಬ್‌ಗಂಜ್‌ನ ರೋಹಿತ್(25), ಬಲರಾಮ್ (40), ರಾಮ್‌ಭವನ್(24), ಸಲಿಕ್‌ರಾಮ್ (25), ಮಸ್ತರ್(21) ಎಂಬವರನ್ನು ಗಡಿಪಾರು ಮಾಡುವಂತೆ ಕುಂದಾಪುರ ಪೊಲೀಸರು, ಕುಂದಾಪುರ ತಹಶೀಲ್ದಾರ್ ಜಿ.ಎಂ.ಬೋರ್ಕರ್‌ಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಅದರಂತೆ ತಹಶೀಲ್ದಾರ್ ಐವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿ ದ್ದಾರೆ. ಇನ್ನು ಮುಂದೆ ಅವರು ಉಡುಪಿ ಜಿಲ್ಲೆಯಲ್ಲಿ ಕಂಡುಬಂದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಕುಂದಾಪುರ ಪೊಲೀಸರು ಈ ಐವರನ್ನು ಎ.6ರಂದು ರೈಲಿನ ಮೂಲಕ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿದ್ದಾರೆ.