ಮೌಲ್ಯಯುತ ಶಿಕ್ಷಣದಿಂದ ಹೃದಯ ಶ್ರೀಮಂತಿಕೆಯ ಸಮಾಜ ನಿರ್ಮಾಣ ಸಾಧ್ಯ: ಇಂದ್ರಜಿತ್ ಲಂಕೇಶ್
ಮೂಡುಬಿದಿರೆ, ಎ.7: ರೈತರ ಅಭಿವೃದ್ಧಿಗಾಗಿ ಸರಕಾರ ಸಬ್ಸಿಡಿ ಕೊಡುವಂತೆ ಶಿಕ್ಷಣ ಕ್ಷೇತ್ರಕ್ಕೂ ಯೋಜನೆಗಳನ್ನು ಮೀಸಲಿಟ್ಟರೆ ದೇಶದ ಅಭಿವೃದ್ಧಿ ಸಾಧ್ಯ. ಓದುವುದೊಂದೇ ಶಿಕ್ಷಣವೆಂದಾಗಬಾರದು. ಮನಸ್ಸನ್ನು ಶಕ್ತಗೊಳಿಸಿ, ವಿದ್ಯಾವಂತರಾಗುವುದರ ಜೊತೆಗೆ ಸಂಸ್ಕಾರವೂ ಬೆಳೆಯಬೇಕು. ಮೌಲ್ಯಯುತ ಶಿಕ್ಷಣ ಪಡೆಯುವುದರಿಂದ ಹೃದಯ ಶ್ರೀಮಂತಿಕೆಯ ಸಮಾಜವನ್ನು ಗಟ್ಟಿಗೊಳಿಸಬಹುದುಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹೇಳಿದರು.
ಅವರು ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ್ದ ಆಳ್ವಾಸ್ ಸಾಂಪ್ರದಾಯಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯಲು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಆಳ್ವಾಸ್ ಕನ್ನಡ ಶಾಲೆಯಲ್ಲಿ ಪ್ರವೇಶ ಪಡೆಯಲು 14,000 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಒಳ್ಳೆಯ ವಾತಾವರಣ ರೂಪಿಸಿ, ಸೂಕ್ತ ಅವಕಾಶಗಳನ್ನು ತೆರೆದಿಟ್ಟರೆ ಕನ್ನಡ ಶಾಲೆಗಳು ಹೇಗೆ ಸಾಧನೆ ಮಾಡಬಹುದು ಎಂಬುದಕ್ಕೆ ಆಳ್ವಾಸ್ ಉತ್ತಮ ಉದಾಹರಣೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ ಅವರು ಮಾತನಾಡಿ ನಾವು ಬದುಕಿನಲ್ಲಿ ಸಾಧನೆತಯ ಶಿಖರಕ್ಕೇರಿದರೂ ನಡೆದು ಬಂದ ಹಾದಿ, ನಮ್ಮ ಹಿನ್ನೆಲೆ, ನಮ್ಮ ಮಣ್ಣಿನ ಮೇಲಿನ ಪ್ರೀತಿ, ಅದರ ಸತ್ವವನ್ನು ಮರೆಯಬಾರದು. ವಿದ್ಯಾರ್ಥಿಗಳು ಮಾಡುತ್ತಿರುವ ಸಾಧನೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಬೆರೆಯುತ್ತಿರುವುದು ಅವರ್ಣನೀಯ ಸಂತಸವನ್ನು ನೀಡುತ್ತಿದೆ ಎಂದರು.
ಸನ್ಮಾನ :
ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಅದಾನಿ ಯುಪಿಸಿಎಲ್ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವಾ ಹಾಗೂ ಆಳ್ವಾಸ್ ಕಾಲೇಜಿನ ವಿವಿಧ ವಿಭಾಗಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ಕೊಂಡವು.