ಬಾಕಿ ಜೆ ನರ್ಮ್ ಬಸ್‌ಗಳ ಓಡಾಟಕ್ಕೆ ಆಗ್ರಹ

Update: 2017-04-07 18:19 GMT

ಮಂಗಳೂರು, ಎ.7: ಜೆ ನರ್ಮ್ ಯೋಜನೆಯಡಿ ನಗರದ ರಸ್ತೆಗಿಳಿಯಬೇಕಿರುವ 14 ಬಸ್‌ಗಳು ಕೂಡಾ ಶೀಘ್ರ ಕಾರ್ಯಾ ರಂಭಿಸುವ ಮೂಲಕ ಸಾರ್ವಜನಿಕರಿಗೆ ಇನ್ನಷ್ಟು ಸರಕಾರಿ ಬಸ್‌ಗಳ ಲಭ್ಯತೆಗೆ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಬಿಜೈನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಟ್ಟಡದ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನರ್ಮ್ ಬಸ್‌ಗಳ ಓಡಾಟಕ್ಕೆ ಸಾರ್ವಜನಿಕರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ, 14 ಜೆ ನರ್ಮ್ ಬಸ್‌ಗಳ ಓಡಾಟದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಇರುವುದರಿಂದ ಅಗತ್ಯವಿರುವ ಕೆಲ ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸುವುದು ಸಾಧ್ಯವಾಗುತ್ತಿಲ್ಲ. ನ್ಯಾಯಾಲಯದಲ್ಲಿ ಶೀಘ್ರವೇ ತಡೆಯಾಜ್ಞೆ ತೆರವಾಗುವ ನಿರೀಕ್ಷೆಯಿದ್ದು, ಬಳಿಕ ಅಗತ್ಯ ರೂಟ್‌ಗಳಿಗೆ ಬಸ್ ಸಂಚಾರ ಆರಂಭಿಸಲಾಗುವುದು ಎಂದರು. ಸಭೆಯಲ್ಲಿ ಹಲವರು ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಸಮಸ್ಯೆ, ಆಗ್ರಹಗಳನ್ನು ವಿವರಿಸಿದರು. ಮಂಗಳೂರಿನಿಂದ ಮುಕ್ಕವರೆಗೆ ತೆರಳುವ ಬಸ್ ಇದೀಗ ಎನ್‌ಐಟಿಕೆವರೆಗೆ ಸಂಚರಿಸುತ್ತದೆ. ಇದನ್ನು ಮುಲ್ಕಿವರೆಗೆ ವಿಸ್ತರಿಸಬೇಕು ಎಂದು ಮುಲ್ಕಿಯ ಮನ್ಸೂರ್ ಎಚ್. ಹಾಗೂ ಅಡ್ಡೂರು ನಾಗರಿಕ ಸಂಘಟನೆಯ ಅಧ್ಯಕ್ಷ ನೂಯಿ ಬಾಲಕೃಷ್ಣ ರಾವ್ ಆಗ್ರಹಿಸಿದರು. ಬೆಂಗಳೂರಿನಿಂದ ಹಾಸನಕ್ಕೆ ಹೊಸದಾಗಿ ರೈಲು ಸಂಚಾರ ಆರಂಭವಾಗಿದ್ದು, ರೈಲು ಹಾಸನ ತಲುಪಿದ ಸಂದರ್ಭ ಅಲ್ಲಿಂದ ಮಂಗಳೂರಿಗೆ ಎಕ್ಸ್‌ಪ್ರೆಸ್ ಕೆಎಸ್ಸಾರ್ಟಿಸಿ ಬಸ್ ಹಾಕಬೇಕು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್‌ನ ಕನಿಷ್ಠ ದರ 5 ರೂ.ಗಳಿದ್ದು, ಮಂಗಳೂರಿನಲ್ಲಿ 7 ರೂ.ಗಳಾಗಿವೆ. ಈ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಸಚ್ಚೀಂದ್ರ ಎಂಬವರು ಮನವಿ ಮಾಡಿದರು. 14 ಜೆ ನರ್ಮ್ ಬಸ್‌ಗಳ ಓಡಾಟದ ಮೇಲಿರುವ ತಡೆಯಾಜ್ಞೆ ತೆರವಿಗಾಗಿ ನೆರವು ನೀಡಲು ಸಿದ್ಧ. ಒಂದು ವರ್ಷದಿಂದ ಬಸ್‌ಗಳ ಓಡಾಟ ಸ್ಥಗಿತಗೊಂಡಂತಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜೂನ್‌ನಲ್ಲಾದರೂ 14 ಬಸ್‌ಗಳು ಓಡಾಟ ಆರಂಭಿಸುವಂತಾಗಬೇಕು ಎಂದು ಹನುಮಂತ ಕಾಮತ್ ಆಗ್ರಹಿಸಿದರು. ಇಂದಬೆಟ್ಟಿನ ಜಾಕೋಬ್ ಎಂ.ಪಿ., ಮುಹಮ್ಮದ್ ಮುಕ್ಕಚ್ಚೇರಿ, ಜಿ.ಕೆ.ಭಟ್, ನರಸಿಂಹರಾಜಪುರದ ಹರೀಶ್, ಲ್ಯಾಂಡ್‌ಲಿಂಕ್ಸ್‌ನ ಉಮಾ ಭಟ್ ಸೇರಿದಂತೆ ಹಲವರು ನೀಡಿದ ದೂರುಗಳನ್ನು ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕಾಂಟ್ರಾಕ್ಟ್ ಕ್ಯಾರಿಯೇಜ್ ಪದ್ಧತಿಯಲ್ಲಿ ಸಂಚರಿಸುವ ಬಸ್‌ಗಳು ಸ್ಟೇಟ್ ಬ್ಯಾಂಕ್ ನಿಲ್ದಾಣ ಪ್ರವೇಶಿಸದಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ತನಿಖೆ ನಡೆದು ಪ್ರವೇಶ ನಿರ್ಬಂಧಿಸುವಂತೆ ಆದೇಶವನ್ನೂ ನೀಡಲಾಗಿದೆ ಎಂದರು.

ಈ ವರ್ಷದಲ್ಲಿ ಕೆಎಸ್ಸಾರ್ಟಿಸಿಗೆ ನೇಮಕಾತಿ ನಡೆದಲ್ಲಿ ಸ್ಥಳೀಯರನ್ನು ನಿರ್ವಾಹಕರನ್ನಾಗಿ ನೇಮಿಸಲಾಗುವುದು. ಜ್ಯೋತಿ ಅಥವಾ ಪಂಪ್‌ವೆಲ್‌ನಲ್ಲಿ ನಿರೀಕ್ಷಕರನ್ನು ನೇಮಿಸಲಾಗುವುದು. ಜೆ ನರ್ಮ್ ಬಸ್‌ಗಳ ಬೋರ್ಡ್‌ಗಳನ್ನು ಪರಿಷ್ಕರಿಸಿ, ಸಮಯದ ಬಗ್ಗೆ ಪ್ರಚಾರ ನೀಡಲಾಗುವುದು ಎಂದವರು ಸಾರ್ವಜನಿಕರ ಅಹವಾಲುಗಳಿಗೆ ಪ್ರತಿಕ್ರಿಯಿಸಿದರು.

ನರ್ಮ್, ವೋಲ್ವೊ ಬಸ್‌ಗಳ ಸಂಚಾರದ ಪ್ರಚಾರಕ್ಕೆ ಕ್ರಮ

ಮಂಗಳೂರಿನಿಂದ ಭಟ್ಕಳಕ್ಕೆ ವೋಲ್ವೊ ಬಸ್ ಆರಂಭವಾಗಿದ್ದರೂ ಪ್ರಚಾರದ ಕೊರತೆಯಿದೆ. ಬೆಂಗಳೂರಿಗೆ ಹೊಸದಾಗಿ ಆರಂಭವಾದ ಬಸ್ ಬಗ್ಗೆಯೂ ಜನರಿಗೆ ಅರಿವಿಲ್ಲ. ಜೆ ನರ್ಮ್ ಬಸ್‌ಗಳ ಸಮಯದ ಬಗ್ಗೆಯೂ ಜನರಿಗೆ ತಿಳುವಳಿಕೆ ಮೂಡಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಸಭೆಯಲ್ಲಿ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಸ್ಗಳಲ್ಲಿ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುವುದು ಎಂದರು.

ಕಂಕನಾಡಿ ರೈಲು ನಿಲ್ದಾಣದಿಂದ ಕೆಎಸ್ಸಾರ್ಟಿಸಿ ಬಸ್

ರೈಲ್ವೆ ಜಂಕ್ಷನ್ (ಕಂಕನಾಡಿ)ನಲ್ಲಿ ಬಂದಿಳಿಯುವ ಅಥವಾ ಅಲ್ಲಿಗೆ ಬರುವ ಪ್ರಯಾಣಿಕರಿಗೆ ಬಸ್ ಸೌಲಭ್ಯವಿಲ್ಲದೆ ತೊಂದರೆಯಾಗಿದೆ. ಹಾಗಾಗಿ ಕೆಎಸ್ಸಾರ್ಟಿಸಿಯಿಂದ ಅಲ್ಲಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸ ಬೇಕೆಂಬ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ, ಕಂಕನಾಡಿ ರೈಲು ನಿಲ್ದಾಣದಿಂದ ಬೆಳಗ್ಗೆ ಬಸ್ ಓಡಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News