ಪೊಲೀಸ್ ದೌರ್ಜನ್ಯ ಖಂಡಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ
ಉಪ್ಪಿನಂಗಡಿ, ಎ.7: ಅಮಾಯಕ ಯುವಕ ಅಹ್ಮದ್ ಖುರೈಷಿಯ ಮೇಲೆ ನಡೆದ ಪೊಲೀಸರ ದೌರ್ಜನ್ಯ ಇಡೀ ಮುಸ್ಲಿಮ್ ಸಮುದಾಯದ ಮೇಲೆ ನಡೆದ ದೌರ್ಜನ್ಯವಾಗಿದೆ. ಅವರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಶಾಫಿ ಬೆಳ್ಳಾರೆ ಹೇಳಿದ್ದಾರೆ. ಅಹ್ಮದ್ ಖುರೈಷಿಯ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಹಾಗೂ ಪ್ರತಿಭಟನೆ ನಿರತರ ಮೇಲೆ ಲಾಠಿ ಚಾರ್ಜ್ ನಡೆಸಿದ ಪೊಲೀಸ್ ಕ್ರಮವನ್ನು ಖಂಡಿಸಿ ಎಸ್‌ಡಿಪಿಐ ವತಿಯಿಂದ ಶುಕ್ರವಾರ ಉಪ್ಪಿನಂಗಡಿಯ ಮಾಲಿಕುದ್ದೀನಾರ್ ಜುಮಾ ಮಸೀದಿಯ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಹ್ಮದ್ ಖುರೈಷಿ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು. ದೌರ್ಜನ್ಯವೆಸಗಿದ ಇಬ್ಬರು ಇನ್‌ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಹ್ಮದ್ ಖುರೈಷಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದವರು ಒತ್ತಾಯಿಸಿದರು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಮಾತನಾಡಿ, ಅಹ್ಮದ್ ಖುರೈಷಿಯ ಮೇಲೆ ನಡೆದ ಪೊಲೀಸರ ದೌರ್ಜನ್ಯ ಅಮಾನುಷ ಕೃತ್ಯವಾಗಿದ್ದು, ಇದನ್ನು ಸಮುದಾಯದ ಎಲ್ಲರೂ ಖಂಡಿಸಬೇಕಿದೆ ಎಂದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಕೂಸಪ್ಪಮಾತನಾಡಿ, ಇಷ್ಟೊಂದು ಗಂಭೀರ ಪ್ರಕರಣ ನಡೆದರೂ,ಜಿಲ್ಲಾ ಉಸ್ತುವಾರಿ ಸಚಿವರು ಈ ದೌರ್ಜನ್ಯ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ಎಂಬಂತಹ ಬಾಲಿಶ ಹೇಳಿಕೆ ನೀಡಿದ್ದಾರೆ. ದೌರ್ಜನ್ಯವೆಸಗಿದ ಪೊಲೀಸರನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ‘ಉಸ್ತುವಾರಿ ಸಚಿವರ ಹಠಾವೋ, ಜಿಲ್ಲಾ ಬಚಾವೋ’ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಉಪತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಪ್ರತಿಭಟನೆಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಇಕ್ಬಾಲ್ ಬಂಗೇರುಕಟ್ಟೆ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಮೀದ್ ಹಾಜಿ ಮೆಜೆಸ್ಟಿಕ್, ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಉಪಾಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಕಾರ್ಯದರ್ಶಿ ಶುಕೂರ್ ಹಾಜಿ ಸುಕ್ರಿಯ, ಮುಖಂಡರಾದ ಸೀಮಾ ಅಬೂಬಕರ್, ಸಿದ್ದೀಕ್ ಮೇದರಬೆಟ್ಟು, ಅಝೀಝ್ ನಿನ್ನಿಕಲ್ಲು, ಹಂಝ ಅಫ್ನಾನ್, ಸುಲೈಮಾನ್ ಬಿ.ಕೆ., ರಝಾಕ್, ಮುಸ್ತಫಾ ನಿರ್ಮಾ ಉಪಸ್ಥಿತರಿದ್ದರು. ಎಸ್‌ಡಿಪಿಐ ಉಪ್ಪಿನಂಗಡಿ ಘಟಕದ ಸಂಚಾಲಕ ಝಕಾರಿಯ ಕೊಡಿಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಸ್ಮಾನ್ ಎ.ಕೆ. ವಂದಿಸಿದರು.