ಬೋಳಿಯಾರ್‌ನಲ್ಲಿ ಮರ ಸಾಗಾಟದ ಲಾರಿ ಪಲ್ಟಿ: ಇಬ್ಬರಿಗೆ ಗಾಯ
ಕೊಣಾಜೆ, ಎ.8: ನೀರು ಸಾಗಾಟದ ಟ್ಯಾಂಕರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡವಾಗಿ ಉರುಳಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಲಾರಿಯ ಚಾಲಕ ಮತ್ತು ನಿರ್ವಾಹಕನಿಗೆ ಗಾಯಗಳಾಗಿದ್ದು, ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 7:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೆಲ್ಕಾರಿನಿಂದ ಕೊಣಾಜೆ ಕಡೆಗೆ ಮರ ಸಾಗಾಟ ಮಾಡುತ್ತಿದ್ದ ಲಾರಿ ಎದುರಿನಲ್ಲಿದ್ದ ಟ್ಯಾಂಕರ್ ಲಾರಿಯನ್ನು ಓವರ್ ಟೇಕ್ ಮಾಡಲು ಮುಂದಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಬಳಿಕ ರಸ್ತೆಗೆ ಮಗುಚಿಬಿದ್ದಿದೆ. ಘಟನೆಯಿಂದ ಮೆಲ್ಕಾರ್-ಮುಡಿಪು ಕಡೆಗೆ ಸಂಚರಿಸುವ ವಾಹನಗಳಿಗೆ ಕೆಲಕಾಲ ಅಡ್ಡಿಯುಂಟಾಯಿತು.
ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಲಾರಿಯನ್ನು ಕ್ರೇನ್ ಮೂಲಕ ಮೇಲೆತ್ತಲು ವ್ಯವಸ್ಥೆ ಕಲ್ಪಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.