ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ಮತ್ತೆ ಬದಲಾವಣೆ

Update: 2017-04-08 08:33 GMT

ಬಂಟ್ವಾಳ, ಎ.8: ಮಂಗಳೂರು ನಗರಕ್ಕೆ ಇನ್ನು ಮುಂದೆ 4 ದಿನ ನಿರಂತರ ನೀರು ಪೂರೈಕೆಯಾಗಲಿದ್ದು, ಬಳಿಕ ಎರಡು ದಿನಗಳ ಕಾಲ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮನಪಾ ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ತುಂಬೆ ವೆಂಟೆಡ್ ಡ್ಯಾಂಗೆ ಇಂದು ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ 4.67 ಮೀಟರ್ ನೀರಿನ ಸಂಗ್ರಹವಿದೆ. ಎಎಂಆರ್ ಡ್ಯಾಂನಲ್ಲಿ 17.73 ಮೀಟರ್ ನೀರು ಶೇಖರಣೆ ಇದೆ. ಇದರ ಆಧಾರದಲ್ಲಿ ಎಪ್ರಿಲ್ ಅಂತ್ಯದವರೆಗೆ ನಗರಕ್ಕೆ 4 ದಿನಗಳ ಕಾಲ ನಿರಂತರ ನೀರು ಪೂರೈಸಲು ಮತ್ತು ಎರಡು ದಿನ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಎಪ್ರಿಲ್ ಅಂತ್ಯದ ವೇಳೆ ಮಳೆಯಾದಲ್ಲಿ ಅಥವಾ ಮಳೆಯಾಗದೇ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಇಳಿಕೆಯಾದರೆ ನೀರು ಪೂರೈಕೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದವರು ತಿಳಿಸಿದರು.

ಈ ಸಂದರ್ಭ ಶಾಸಕ ಜೆ.ಆರ್.ಲೋಬೊ, ಮಾಜಿ ಮೇಯರ್ ಮಹಾಬಲ ಮಾರ್ಲ, ಮನಪಾ ಹಿರಿಯ ಸದಸ್ಯ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News