ಬಾಂಗ್ಲಾದೇಶಕ್ಕೆ 4.5 ಬಿ.ಡಾ.ಸಾಲ ಘೋಷಿಸಿದ ಭಾರತ
ಹೊಸದಿಲ್ಲಿ,ಎ.8: ಇಂದಿಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ಜೊತೆ ವ್ಯಾಪಕ ಚರ್ಚೆಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ 4.5 ಬಿ.ಡಾ.ಗಳ ರಿಯಾಯಿತಿ ಸಾಲನ್ನು ಪ್ರಕಟಿಸಿದರು. ಇದೇ ವೇಳೆ ತಮ್ಮ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಉಭಯ ರಾಷ್ಟ್ರಗಳು ರಕ್ಷಣೆ ಮತ್ತು ನಾಗರಿಕ ಪರಮಾಣು ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ಡಝನ್ ಒಪ್ಪಂದಗಳಿಗೆ ಸಹಿ ಹಾಕಿದವು.
ಹಸೀನಾ ಅವರೊಂದಿಗೆ ಮಾಧ್ಯಮಗಳಿಗೆ ಜಂಟಿ ಹೇಳಿಕೆಯನ್ನು ನೀಡಿದ ಮೋದಿ, ಭಾರತವು ಸದಾ ಬಾಂಗ್ಲಾದೇಶ ಮತ್ತು ಅದರ ಪ್ರಜೆಗಳ ಏಳಿಗೆಗೆ ಬೆಂಬಲವಾಗಿ ನಿಂತಿದೆ. ಬಾಂಗ್ಲಾದೇಶದ ಪಾಲಿಗೆ ನಾವು ಸುದೀರ್ಘ ಕಾಲದ ಮತ್ತು ವಿಶ್ವಾಸಿ ಅಭಿವೃದ್ಧಿ ಪಾಲುದಾರರಾಗಿದ್ದೇವೆ. ನಮ್ಮ ಸಹಕಾರದ ಫಲಗಳು ಜನರನ್ನೂ ತಲುಪಬೇಕು ಎಂದು ಭಾರತ ಮತ್ತು ಬಾಂಗ್ಲಾದೇಶ ನಿರ್ಧರಿಸಿವೆ ಎಂದು ಹೇಳಿದರು.
ಭಾರತವು ಹೊಸಕ್ಷೇತ್ರಗಳಲ್ಲಿ, ವಿಶೇಷವಾಗಿ ವಿದ್ಯುನ್ಮಾನ, ಐಟಿ, ಸೈಬರ್ ಭದ್ರತೆ, ಬಾಹ್ಯಾಕಾಶ ಅನ್ವೇಷಣೆ ಮತ್ತು ನಾಗರಿಕ ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಸೇರಿದಂತೆ ಕೆಲವು ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಗ್ಲಾದೇಶದೊಂದಿಗೆ ಸಹಕಾರವನ್ನು ಹೊಂದಲು ಬಯಸಿದೆ ಎಂದು ಮೋದಿ ನುಡಿದರು.
ಮಿಲಟರಿ ಪೂರೈಕೆಗಳಿಗಾಗಿ ಬಾಂಗ್ಲಾದೇಶಕ್ಕೆ 500 ಮಿ.ಡಾ.ಹೆಚ್ಚುವರಿ ಸಾಲವನ್ನೂ ಅವರು ಪ್ರಕಟಿಸಿದರು.