ಮುಂದಿನ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಸ್ಪರ್ಧೆ: ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ರಾಜು

Update: 2017-04-08 15:25 GMT

ಉಡುಪಿ, ಎ.8: ಮುಂದಿನ ಚುನಾವಣೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಸ್ಪರ್ಧಿರ್ಸಲಿದ್ದು, ಉತ್ತಮ ಅಭ್ಯರ್ಥಿಗಳನ್ನು ಗುರುತಿಸಿ ಚುನಾವಣಾ ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ರಾಜು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭಾ ಸಂಘಟನೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಗೊಂದಲವನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು. ಮುಂದಿನ ದಿನಗಳಲ್ಲಿ ಪದಾಕಾರಿಗಳ ನೇಮಕ ಮಾಡಲಾಗುವುದು. ಉತ್ತಮ ಅಭ್ಯರ್ಥಿ ಸಿಕ್ಕರೆ ಇಲ್ಲಿಯೂ ಚುನಾವಣೆಗೆ ಸ್ಪರ್ಧಿಸಲಾಗುವುದು ಎಂದರು.

ರಾಮಮಂದಿರ ನಿರ್ಮಾಣವು ಭಾರತೀಯರ ಭಾವನಾತ್ಮಕ ವಿಚಾರವಾಗಿರುವುದರಿಂದ ಕೋರ್ಟ್ ಇದರಲ್ಲಿ ಮಧ್ಯಪ್ರವೇಶ ಮಾಡುವುದು ಸರಿಯಲ್ಲ. ಈ ವಿವಾದವನ್ನು ಹೊರಗಡೆ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅದರಂತೆ ಮಾತುಕತೆ ನಡೆಸಲು ನಾವು ಸಮಿತಿ ರಚಿಸಿದ್ದೇವೆ. ಕೆಲವು ಪಕ್ಷ ಈ ವಿಚಾರವನ್ನು ಚುನಾವಣೆ ವೇಳೆ ಕೈಗೆತ್ತಿ ರಾಜಕೀಯ ಮಾಡುತ್ತಿವೆ ಎಂದು ಅವರು ಆರೋಪಿಸಿದರು.

ರಾಜ್ಯ ಬಿಜೆಪಿಯು ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವಲ್ಲಿ ಸೋತಿದೆ. ಅದೊಂದು ನಿಷ್ಕ್ರಿಯರ ಗುಂಪಾಗಿದೆ. ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಎಲ್ಲ ಪಕ್ಷಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್, ರೋಹಿತ್ ಕುಮಾರ್, ಧರ್ಮೇಂದ್ರ, ಸಮರ್ಥ ಭಟ್, ಪ್ರತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News