ಉದ್ಯಾವರದಲ್ಲಿ ಮಸೀದಿ ಪದಾಧಿಕಾರಿಗಳ ಸಮಾವೇಶ

Update: 2017-04-08 16:36 GMT

ಉಡುಪಿ, ಎ.8: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ "ಸಮುದಾಯದ ಅಭಿವೃದ್ಧಿಗಾಗಿ ಮಸೀದಿಗಳು" ಎಂಬ ವಿಷಯದಲ್ಲಿ ಮಸೀದಿ ಪದಾಧಿಕಾರಿಗಳ ಸಮಾವೇಶವು ಉದ್ಯಾವರದ ಹಫ್ಸಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸಮಾವೇಶವನ್ನು ಸುನ್ನಿ ಯುವಜನ ಸಂಘದ ರಾಜ್ಯ ಕೌನ್ಸಿಲ್ ಸದಸ್ಯ ಎಸ್.ಪಿ.ಹಂಝ ಸಖಾಫಿ ಉದ್ಘಾಟಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಹೆಚ್ಚುವರಿ ಪೊಲೀಸ್ ಆಯುಕ್ತ ಹಾಗೂ ರಾಷ್ಟ್ರೀಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಮಾತನಾಡಿ, ಮುಸ್ಲಿಮ್ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಸಮುದಾಯದ 42 ಶೇ. ಜನರು ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಅರ್ಧ ಶೇಕಡಕ್ಕಿಂತಲೂ ಕಡಿಮೆ ಇದೆ. ಈ ಸ್ಥಿತಿಯಲ್ಲಿ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸರಕಾರವು ಬಡ ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದಕ್ಕೆ ಪೂರಕವಾಗಿ ಮಸೀದಿಗಳು ತಮ್ಮ ಜಮಾಅತ್ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ, ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಅದರ ಆಧಾರದಲ್ಲಿ ತಮ್ಮ ಜಮಾಅತ್‌ನ ಅರ್ಹರು ಸರಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಕಾರ್ಯಯೋಜನೆಗಳನ್ನು ರೂಪಿಸಬೇಕು ಎಂದರು.

"ಸಮುದಾಯದ ಅಭಿವೃದ್ಧಿಗಾಗಿ ಮಸೀದಿಗಳು" ಎಂಬ ವಿಷಯ ಮಂಡಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಇಂದು ಮಸೀದಿಗಳು ಧಾರ್ಮಿಕ ಅಭ್ಯಾಸ ಮತ್ತು ಇತರ ಸಮುದಾಯಗಳೊಂದಿಗೆ ನಮ್ಮ ಸಂಬಂಧಗಳನ್ನು ಬಲಪಡಿಸುವ ಕೇಂದ್ರಗಳಾಗಬೇಕು ಎಂದರು. ಸಮಾರೋಪ ಭಾಷಣ ಮಾಡಿದ ಸಮಸ್ತ ಉಲಮಾ ಮುಶಾವರದ ಅಡಳಿತ ಸಮಿತಿ ಸದಸ್ಯ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿದರು.

ವೌಲಾನಾ ಅಝೀಝುದ್ದೀನ್ ರಿಝ್ವನ್ ಕಾರ್ಕಳ ಕಿರಾಅತ್ ಪಠಿಸಿದರು. ಕಾರ್ಯಕ್ರಮದ ಸಂಚಾಲಕ ಪಿ. ಖಲೀಲ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಖಾಸಿಂ ಬಾರ್ಕೂರು ಮತ್ತು ಉಪಾಧ್ಯಕ್ಷ ಅಶ್ಫಾಕ್ ಅಹ್ಮದ್ ಕಾರ್ಕಳ ವಂದಿಸಿದರು. ಉಡುಪಿ ತಾಲೂಕಾಧ್ಯಕ್ಷ ಅನ್ವರ್ ಅಲಿ ಕಾರ್ಯಕ್ರಮ ನಿರೂಪಿಸಿದರು.

ತಂತ್ರಿಗಳ ಬದಲಾವಣೆಗೆ ನ್ಯಾಯಾಲಯ ತಡೆಯಾಜ್ಞೆ

  ಕುಂಟಾರು ತಂತ್ರಿಗೆ ಜಾತ್ರಾ ಆಮಂತ್ರಣ ನೀಡಿದ ಸಮಿತಿ, ಗೊಂದಲಕ್ಕೆ ತೆರೆ ಪುತ್ತೂರು : ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕುಂಟಾರು ರವೀಶ ತಂತ್ರಿ ಅವರನ್ನು ಬದಲಾವಣೆ ಮಾಡಿದ್ದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ನಿರ್ಣಯಕ್ಕೆ ಹೈಕೋರ್ಟ್ ವಿಬಾಗೀಯ ನ್ಯಾಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಈ ಹಿನ್ನೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರಮುಖರು ಕುಂಟಾರು ರವೀಶ ತಂತ್ರಿ ಅವರ ಮನೆಗೆ ಶುಕ್ರವಾರ ರಾತ್ರಿ ತೆರಳಿ ಈ ಬಾರಿಯ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿದ್ದಾರೆ.
 


ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರೂ ಆಗಿರುವ ದೇವಾಲಯದ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಮತ್ತು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್.ರವೀಂದ್ರ ಶುಕ್ರವಾರ ರಾತ್ರಿ ಕುಂಟಾರು ರವೀಶ್ ತಂತ್ರಿ ಅವರ ಮನೆಗೆ ತೆರಳಿ ಆಮಂತ್ರಣ ನೀಡಿದ್ದು, ಅದಕ್ಕೆ ರವೀಶ ತಂತ್ರಿ ಅವರು ಒಪ್ಪಿಗೆ ಸೂಚಿಸುವುದಾಗಿ ತಿಳಿದು ಬಂದಿದೆ. ತಂತ್ರಿಗಳ ಒಪ್ಪಿಗೆಯಿಂದಾಗಿ ತಂತ್ರಿಗಳ ಬದಲಾವಣೆ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ. ದೇವಾಲಯದ ವ್ಯವಸ್ಥಾಪನಾ ಸಮಿತಿಯವರು ಈ ಬಾರಿಯ ಜಾತ್ರೋತ್ಸವದ ತಂತ್ರ ಕಾರ್ಯ ನಿರ್ವಹಿಸಲು ರವೀಶ ತಂತ್ರಿ ಅವರನ್ನು ಕೈಬಿಟ್ಟು ಕೆಮ್ಮಿಂಜೆ ನಾಗೇಶ್ ತಂತ್ರಿ ಅವರ ಪುತ್ರ ಕಾರ್ತಿಕ್ ತಂತ್ರಿ ಅವರನ್ನು ನೇಮಿಸುವ ನಿರ್ಣಯ ಕೈಗೊಂಡು ಕೆಲ ದಿನಗಳ ಹಿಂದೆ ಕೆಮ್ಮಿಂಜೆ ತಂತ್ರಿ ಅವರ ಮನೆಗೆ ತೆರಳಿ ಅವರನ್ನು ಜಾತ್ರೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದರು. ಕೆಮ್ಮಿಂಜೆ ತಂತ್ರಿ ಅವರು ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ನಡುವೆ ತಂತ್ರಿಗಳ ಬದಲಾವಣೆ ಕುರಿತು ವ್ಯವಸ್ಥಾಪನಾ ಸಮಿತಿ ಕೈಗೊಂಡಿರುವ ನಿರ್ಣಯದ ವಿರುದ್ಧ ಕಂಟ್ರಮಜಲು ಬಾಸ್ಕರ ರೈ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಬಾಗೀಯ ನ್ಯಾಯ ಪೀಠ ತಂತ್ರಿಗಳ ಬದಲಾವಣೆ ಕುರಿತು ವ್ಯವಸ್ಥಾಪನಾ ಸಮಿತಿ ಕೈಗೊಂಡಿದ್ದ ನಿರ್ಣಯಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ಆದೇಶದ ಹಿನ್ನಲೆಯಲ್ಲಿ ರವೀಶ ತಂತ್ರಿ ಅವರನ್ನು ಆಮಂತ್ರಿಸುವ ಅನಿವಾರ್ಯತೆ ಎದುರಾಗಿತ್ತು. ದೇವಾಲಯದಲ್ಲಿ ಎ.10ರಂದು ಧ್ವಜಾರೋಹಣದೊಂದಿಗೆ ಪುತ್ತೂರು ಜಾತ್ರಾ ಮಹೋತ್ಸವ ಆರಂಗೊಳ್ಳಲಿದ್ದು, ಧ್ವಜಾರೋಹಣದಂದೇ ಆಗಮಿಸುವ ಕುರಿತು ರವೀಶ್ ತಂತ್ರಿ ಅವರು ಒಪ್ಪಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಪೋಟೋ:8ಪಿಟಿಆರ್-ಆಮಂತ್ರಣ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News