ಭಾರತದಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ರಾಜಕೀಯ ಲೆಕ್ಕಾಚಾರ ನಡೆಸಲಾಗುತ್ತಿದೆ: ತುಫೈಲ್ ಮುಹಮ್ಮದ್

Update: 2017-04-08 18:26 GMT

ಮಂಗಳೂರು, ಎ.8: ಜಾತ್ಯತೀತತೆಯ ನೈಜ ಅನುಷ್ಠಾನ ಘೋಷಣೆಯಿಂದ ಸಾಧ್ಯವಾಗದು. ಆಚರಣೆಯ ಮೂಲಕ ಮಾತ್ರ ಸಾಧ್ಯ. ಭಾರತದಲ್ಲಿ ಜಾತ್ಯತೀತತೆಯ ಚಳವಳಿಯ ಹೆಸರಿನಲ್ಲಿ ರಾಜಕೀಯದ ಲೆಕ್ಕಾಚಾರ ನಡೆಸುತ್ತಾ ಬರಲಾಗಿದೆ. ಸಹಜವಾಗಿ ಅದಕ್ಕೆ ಪ್ರತಿಯಾಗಿ ಚಳವಳಿಯೂ ಹುಟ್ಟಿಕೊಂಡಿದೆ. ದೇಶದ ರಾಜಕೀಯ ತಿರುವಿಗೆ ಈ ಬೆಳವಣಿಗೆ ಪ್ರಮುಖ ಕಾರಣವಾಗಿದೆ ಎಂದು ದೆಹಲಿಯ ಪತ್ರಕರ್ತ ತುಪೈಲ್ ಮುಹಮ್ಮದ್ ಅಭಿಪ್ರಾಯಿಸಿದ್ದಾರೆ.

ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಸಿಟಿಜನ್ ಫೋರಂ ಮಂಗಳೂರು ಘಟಕದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಜಾತ್ಯತೀತ ರಾಷ್ಟ್ರಗಳ ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದ್ದರು.

ಪ್ರಪಂಚದಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು, ಭಾರತದಲ್ಲಿ ನರೇಂದ್ರ ಮೋದಿ ಅಧಿಕಾರ ಪಡೆದಿರುವುದು ವಿಶೇಷ ಬೆಳವಣಿಗೆ. ಪ್ರಪಂಚದಲ್ಲಿ ಎರಡನೆ ಮಹಾಯುದ್ಧ ಜಾಗತಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾದ ಸನ್ನಿವೇಶವನ್ನು ಸೃಷ್ಟಿಸಿತ್ತು. ಅದೇ ರೀತಿ 1979ರಲ್ಲಿ ಆಯತುಲ್ಲಾ ಖೊಮೇನಿ ಲೇಖಕ ಸಲ್ಮಾನ್ ರಶ್ದಿಯವರ ಸೆಟಾನಿಕ್ ವರ್ಸ್‌ಸ್ ಕೃತಿ ವಿರುದ್ಧ ಪತ್ವಾ ಹೊರಡಿಸಿರುವುದು ಹಾಗೂ ದೇಶದ ಒಳಗಿನ ಆಡಳಿತದಲ್ಲೂ ತಂದಿರುವ ನಿಯಮಾವಳಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ನಿಲುವಿಗೆ ವಿರುದ್ಧವಾದುದು. ಭಾರತದಲ್ಲಿ ಧಾರ್ಮಿಕ ಸುಧಾರಣೆಗಳು ಆಯಾ ಧರ್ಮಗಳ ಒಳಗೆ ಆಗಬೇಕಾಗಿದೆ.ಆಗ ಮಾತ್ರ ಜಾತ್ಯತೀತತೆಯ ಹೆಸರಿನ ರಾಜಕಾರಣವನ್ನು ತಡೆಯಲು ಸಾಧ್ಯ. ಅಮೆರಿಕಾ ಅಧ್ಯಕ್ಷ ಒಬಾಮ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಕೆಲವು ತುಷ್ಟೀಕರಣದ ನಿರ್ಧಾರಗಳು ಟ್ರಂಪ್ ಅಧಿಕಾರಕ್ಕೇರಲು ಕಾರಣವಾಯಿತು. ಭಾರತದಲ್ಲೂ ಮನಮೋಹನ್ ಸಿಂಗ್ ಆಡಳಿತಾವಧಿಯ ಕೆಲವೊಂದು ನಿಲುವುಗಳು ಮೋದಿಗೆ ಸಹಕಾರಿಯಾಯಿತು ಎಂದವರು ಹೇಳಿದರು.

ಸಮಾರಂಭದಲ್ಲಿ ಸಿಟಿಜನ್ ಕೌನ್ಸಿಲ್‌ನ ಅಧ್ಯಕ್ಷ ಸುನಿಲ್ ಆಚಾರ್ಯ,ಉದ್ಯಮಿ ಸಂತೊಷ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News