ಕಾವೂರು: ಉದ್ಯೋಗ ಮೇಳದಲ್ಲಿ 1,020 ನೋಂದಣಿ

Update: 2017-04-08 18:45 GMT

  • 40ಕ್ಕೂ ಅಧಿಕ ಕಂಪೆನಿಗಳು ಭಾಗಿ
  • 144 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ

542 ಮಂದಿ ಆಯ್ಕೆ

ಕಾವೂರು, ಎ.8: ಕಾವೂರು ಪ್ರಥಮ ದರ್ಜೆ ಕಾಲೇಜು ಹಾಗೂ ಶಾಸಕ ಮೊಯ್ದನ್ ಬಾವ ನೇತೃತ್ವದಲ್ಲಿ ಇಂದು ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1,020 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಳ್ಳುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉದ್ಯೋಗ ಮೇಳದಲ್ಲಿ 144 ಅಭ್ಯರ್ಥಿಗಳನ್ನು ವಿವಿಧ ಕಂಪೆನಿಗಳು ಸ್ಥಳದಲ್ಲೇ ನೇಮಕಾತಿ ಮಾಡಿಕೊಂಡಿದ್ದು, ಉಳಿದಂತೆ 542 ಮಂದಿಯನ್ನು ವಿವಿಧ ಕಂಪೆನಿಗಳು ಆಯ್ಕೆ ಮಾಡಿಕೊಂಡಿವೆ.

ಬೆಳಗ್ಗೆ 9:30ಕ್ಕೆ ಆರಂಭವಾದ ಉದ್ಯೋಗ ಮೇಳದಲ್ಲಿ ಸುಮಾರು 600 ಮಂದಿ ಪೂರ್ವಭಾವಿಯಾಗಿ ಹೆಸರು ನೋಂದಾಯಿಸಿದ್ದರೆ ಕೆಲವರು ಸ್ಥಳದಲ್ಲೇ ನೋಂದಣಿ ಮಾಡಿ ತಮ್ಮ ಶಿಕ್ಷಣಕ್ಕೆ ಅನುಗುಣ ವಾದ ಉದ್ಯೋಗ ಪಡೆಯಲು ಮುಂದಾದರು. ಮೇಳದಲ್ಲಿ ಐಡಿಬಿಐ, ಅಕ್ಷಯ ಪಾತ್ರೆ, ದಿಯಾ ಸಿಸ್ಟಮ್ಸ್, ಭದ್ರತಾ ಸೇವಾ ಸಂಸ್ಥೆಗಳು, ಮಾರುಕಟ್ಟೆ ವಿಭಾಗ ಸೇರಿದಂತೆ 40 ವಿವಿಧ ಕಂಪೆನಿಗಳು ಭಾಗವಹಿಸಿದ್ದವು. ದಿಯಾ ಸಿಸ್ಟಮ್ಸ್‌ನ ಸಿಇಒ ಡಾ.ರವಿಚಂದ್ರರಾವ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ದೀಪಕ್ ಪೂಜಾರಿ, ನಾಗವೇಣಿ, ಪುರುಷೋತ್ತಮ್ ಚಿತ್ರಾಪುರ, ಮಹಿಳಾ ಕಾಂಗ್ರೆಸ್ ಘಟಕದ ಶಕುಂತಳಾ ಕಾಮತ್, ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ, ಸಂಯೋಜಕ ಮನೋಜ್ ಲೋಹಿ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಾ ಪಲಾಯನ ನೋವಿನ ಸಂಗತಿ: ಮೊಯ್ದೀನ್ ಬಾವ

ಉದ್ಯೋಗ ಮೇಳವನ್ನು ಶಾಸಕ ಮೊಯ್ದೀನ್ ಬಾವ ಉದ್ಘಾಟಿಸಿ ಉದ್ಯೋಗಾಕಾಂಕ್ಷಿಗಳಿಗೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಅವರು, ಭಾರತ ವಿಶ್ವದಲ್ಲೇ ಅತ್ಯಧಿಕ ಯುವ ಶಕ್ತಿಯನ್ನು ಹೊಂದಿರುವ ದೇಶವಾಗಿದೆ. ಹಾಗಿದ್ದರೂ ಪ್ರತಿಭಾವಂತ ಐಟಿ-ಬಿಟಿ ಶಕ್ತಿಗಳು ವಿದೇಶದತ್ತ ಮುಖ ಮಾಡುವುದು ನೋವಿನ ಸಂಗತಿ. ದೇಶವನ್ನು ತಾಂತ್ರಿಕ ಕೌಶಲ್ಯದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಶಕ್ತಿ ನಮ್ಮದೆಂಬ ಹೆಮ್ಮೆಯನ್ನೂ ನಾವು ಪಡಬೇಕಿದೆ ಎಂದರು. ಜಿಲ್ಲೆಯಲ್ಲಿ ನಿರುದ್ಯೋಗಿ ಯುವ ಜನರಿಗೆ ಕಂಪೆನಿ ಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಈ ಮೇಳ ಆಯೋಜಿಸಲಾಗಿದೆ. ಹೊಟೇಲ್, ಮಾಹಿತಿ ತಂತ್ರಜ್ಞಾನ, ಸಹಿತ ವಿವಿಧ ಕಂಪೆನಿಗಳು ಬಂದಿವೆ. ವಿದ್ಯಾರ್ಹತೆ ಆಧಾರದ ಮೇಲೆ ಅಭ್ಯರ್ಥಿಗಳು ಉದ್ಯೋಗ ಪಡೆಯಲಿದ್ದಾರೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News