×
Ad

‘ಕುಡ್ಲ ಎಕ್ಸ್‌ಪ್ರೆಸ್’ ರೈಲು ಸಂಚಾರಕ್ಕೆ ಚಾಲನೆ

Update: 2017-04-09 12:17 IST

ಮಂಗಳೂರು, ಎ.9: ಮಂಗಳೂರು-ಬೆಂಗಳೂರು(ಯಶವಂತಪುರ) ಹಗಲು ರೈಲು ‘ಕುಡ್ಲ ಎಕ್ಸ್‌ಪ್ರೆಸ್’ ಓಡಾಟಕ್ಕೆ ಇಂದು ಪೂರ್ವಾಹ್ನ ಚಾಲನೆ ದೊರೆತಿದೆ. 

ಬಹುನಿರೀಕ್ಷಿತ 'ಕುಡ್ಲ ಎಕ್ಸ್‌ಪ್ರೆಸ್‌'ಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಇಂದು ಪೂರ್ವಾಹ್ನ 11:48ಕ್ಕೆ ಗೋವಾದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಇದರಂಗವಾಗಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜ, ವಿಪಕ್ಷ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೆ ವಿದ್ಯುದ್ದೀಕರಣ, ಪಣಂಬೂರು-ಜೋಕಟ್ಟೆ ಜೋಡಿ ಹಳಿ ಲೋಕಾರ್ಪಣೆ

ಇದೇ ಸಂದರ್ಭದಲ್ಲಿ ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್ ಹಾಗೂ ಚೆರ್ವತ್ತೂರು ರೈಲು ನಿಲ್ದಾಣಗಳ ನಡುವಿನ 82 ಕಿ.ಮೀ. ರೈಲ್ವೆ ವಿದ್ಯುದ್ದೀಕರಣ ಮತ್ತು ಪಣಂಬೂರು-ಜೋಕಟ್ಟೆ ನಡುವಿನ 3.5 ಕಿ.ಮೀ. ಜೋಡಿ ಹಳಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.

‘ಕುಡ್ಲ ಎಕ್ಸ್‌ಪ್ರೆಸ್’ ಓಡಾಟ ಸಮಯ ಹೀಗಿದೆ

ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರಿನ ಯಶವಂತಪುರ ನಡುವೆ ಈ ನೂತನ ರೈಲು ಸಂಚರಿಸಲಿದೆ. ರೈಲುಗಾಡಿ ಸಂಖ್ಯೆ 16576/16575 ವಾರಕ್ಕೆ ಮೂರು ದಿನ ಓಡಾಟ ನಡೆಸಲಿದೆ. ರೈಲು ನಂ. 16576 ಮಂಗಳೂರು ಜಂಕ್ಷನ್‌ನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಪೂರ್ವಾಹ್ನ 11:30ಕ್ಕೆ ಹೊರಟು ರಾತ್ರಿ 8:30ಕ್ಕೆ ಯಶವಂತಪುರ ತಲುಪಲಿದೆ.

ರೈಲು ನಂ. 16575 ಯಶವಂತಪುರದಿಂದ ಪ್ರತೀ ರವಿವಾರ, ಮಂಗಳವಾರ ಹಾಗೂ ಗುರುವಾರ ಸಂಚರಿಸಲಿದೆ. ಯಶವಂತಪುರದಿಂದ ಬೆಳಗ್ಗೆ 7:50ಕ್ಕೆ ಹೊರಟು ಸಂಜೆ 5:30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News