ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ: ಪೊಲೀಸರ ಅಮಾನತಿಗೆ 15 ದಿನಗಳ ಗಡುವು ನೀಡಿದ ದಲಿತ ಸಂಘಟನೆ
ಮಂಗಳೂರು, ಎ.9: ಅಹ್ಮದ್ ಖರೇಷಿ ಮೇಲೆ ದೈಹಿಕ ದೌರ್ಜನ್ಯ ಎಸಗಿರುವ ಪೊಲೀಸರನ್ನು 15 ದಿನದೊಳಗೆ ಅಮಾನತು ಮಾಡದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಸಮಿತಿ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಮತ್ತು ದಿನೇಶ್ ಕುಮಾರ್ ರವಿವಾರ ನಗರದ ರೋಶನಿ ನಿಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖುರೇಷಿಯ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಿಸಬೇಕು. ಆತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಆಯುಕ್ತ ಚಂದ್ರಶೇಖರ್‌ರಂತಹ ದಕ್ಷ ಅಧಿಕಾರಿಯ ಸಮ್ಮುಖ ಇಂತಹ ಘಟನೆ ನಡೆಯಬಾರದಿತ್ತು. ಆಯುಕ್ತರ ಕಚೇರಿ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ಪಿಎಫ್ ಐ ಕಾರ್ಯಕರ್ತರ ಮೇಲೆ ಪೊಲೀಸರು ಪೂರ್ವಾಗ್ರಹ ಪೀಡಿತರಾಗಿ ಲಾಠಿಚಾರ್ಜ್ ಮಾಡಿ ಹೋರಾಟ ದಮನ ಮಾಡುವ ಪ್ರಯತ್ನ ನಡೆಸಿರುವುದು ಖಂಡನೀಯ ಎಂದು ಭಾಸ್ಕರ್ ಹೇಳಿದರು.
ಸಂಘಟನೆಯ ಬೇಡಿಕೆಯನ್ನು 15 ದಿನಗಳೊಳಗೆ ಈಡೇರಿಸದಿದ್ದರೆ ಹೋರಾಟದಿಂದ ನಡೆಯುವ ಪರಿಣಾಮಗಳಿಗೆ ಪೊಲೀಸ್ ಇಲಾಖೆ ಮತ್ತು ಸರಕಾರ ಹೊಣೆಯಾಗುತ್ತದೆ. ನಮ್ಮ ಸಮಿತಿಯು ಹೇಳಿಕೆ ಕೊಟ್ಟು ಸುಮ್ಮನಿರುವುದಿಲ್ಲ. ಹೋರಾಟದ ರೂಪುರೇಷದ ಬಗ್ಗೆ ಎ.14ರ ಬೆಂಗಳೂರು ಚಲೋದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ನುಡಿದರು.
ಖುರೇಷಿ ಕೇಸಿನಲ್ಲಿ ಪೊಲೀಸರು ಲೋಪ ಎಸಗಿದ್ದಾರೆ. ಆತನನ್ನು ಬಂಧಿಸಿ 24 ಗಂಟೆಯೊಳಗೆ ಕೋರ್ಟ್‌ಗೆ ಹಾಜರುಪಡಿಸಬೇಕಿತ್ತು. ವಾರಗಟ್ಟಲೆ ಠಾಣೆಯಲ್ಲಿ ಬಚ್ಚಿಟ್ಟು ಹಿಂಸೆ ನೀಡಿದ್ದಾರೆ. ಆತ ಆರೋಪಿ ಮಾತ್ರ. ಒಂದು ವೇಳೆ ಅಪರಾಧಿಯಾಗಿದ್ದರೂ ಹೊಡೆಯುವಂತಿಲ್ಲ. ಆರೋಪ ಸಾಬೀತಾಗಿ ಗಲ್ಲು ಶಿಕ್ಷೆ ಕೊಟ್ಟರೂ ಸಮಿತಿಯು ಪ್ರಶ್ನಿಸುವುದಿಲ್ಲ. ಜಿಲ್ಲೆಯ ದುಷ್ಟ ಪೊಲೀಸರನ್ನು ಹೊರಗೆ ಹಾಕಬೇಕು. ಈ ನಿಟ್ಟಿನಲ್ಲಿ ಸಿಎಂ, ಗೃಹ ಸಚಿವರು ಮತ್ತು ಡಿಜಿಪಿ ಜತೆ ಮಾತನಾಡುತ್ತೇವೆ ಎಂದರು.
ಮಂಗಳೂರಿನಲ್ಲಿ ನಾಗರಿಕ ಪೊಲೀಸ್ ವ್ಯವಸ್ಥೆ ಇದೆಯೋ ಎಂಬ ಸಂಶಯ ಕಾಡುತ್ತಿದೆ. 2 ದಿನದ ಹಿಂದೆ ಮುಡಿಪುನಲ್ಲಿ ದಲಿತ ವ್ಯಕ್ತಿಯ ಮೇಲೆ ಮಹಿಳಾ ಎಸ್ಸೈ ಹಲ್ಲೆ ನಡೆಸಿ, ಗಾಂಜಾ ಕೇಸಿನಲ್ಲಿ ಫಿಕ್ಸ್ ಮಾಡುವ ಬೆದರಿಕೆಯೊಡ್ಡಿದ್ದಾರೆ. ಈ ಘಟನೆ ಸೇರಿದಂತೆ ಪಿಎ್ಐ ಕಾರ್ಯಕರ್ತರ ಮೇಲೆ ನಡೆದಿರುವ ಲಾಠಿಚಾರ್ಜ್ ಹಾಗೂ ಎಎಸ್ಸೈ ಐತಪ್ಪರ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ದಿನೇಶ್ ಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ದಮನಿತರ ಸ್ವಾಭಿಮಾನಿ ವೇದಿಕೆ ಮುಖಂಡರಾದ ರಘುವೀರ್ ಸೂಟರ್‌ಪೇಟೆ, ಅಶೋಕ್ ಕೊಂಚಾಡಿ ಹಾಗೂ ಸಿಕಂದರ್ ಪಾಷಾ ಉಪಸ್ಥಿತರಿದ್ದರು.
*ಬೆಂಗಳೂರು ಚಲೋ:
ರಾಜ್ಯದ ಭೂಮಿ ಹೋರಾಟ ಸಮಿತಿ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮತ್ತು ಜನಾಂದೋಲಕ್ಕಾಗಿ ಮಹಾಮೈತ್ರಿ ಎಂಬ ಮೂರು ಸಂಘಟನೆಗಳ ನೇತೃತ್ವದಲ್ಲಿ 160ಕ್ಕೂ ಅಧಿಕ ಸಂಘಟನೆಗಳು ಎ.14ರ ಅಂಬೇಡ್ಕರ್ ಜಯಂತಿಯಂದು ‘ಬೆಂಗಳೂರು ಚಲೋ’ ಆಯೋಜಿಸಿದೆ. ಆ.15ರ ನಂತರ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ 10 ಬೇಡಿಕೆಗಳ ಈಡೇರಿಕೆಗಾಗಿ ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ತಿಳಿಸಿದರು.