ಧರ್ಮದ ಡ್ರಗ್ಸ್‌ನಿಂದ ಮಕ್ಕಳನ್ನು ರಕ್ಷಿಸಿ: ಬಿ.ಕೆ.ಹರಿಪ್ರಸಾದ್

Update: 2017-04-09 10:38 GMT

ಉಡುಪಿ, ಎ.9: ಇಂದು ಮಕ್ಕಳ ತಲೆಗೆ ಧರ್ಮದ ಡ್ರಗ್ಸ್‌ನ್ನು ಬಿತ್ತುವ ಕೆಲಸ ನಡೆಯುತ್ತಿದ್ದು, ಇದರಿಂದ ಮಕ್ಕಳನ್ನು ರಕ್ಷಿಸುವ ಕಾರ್ಯ ನಡೆಯಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್ ಹೇಳಿದ್ದಾರೆ.

ದೊಡ್ಡಣಗುಡ್ಡೆಯಲ್ಲಿರುವ ಬಿಲ್ಲವರ ಸೇವಾ ಟ್ರಸ್ಟ್ ಸುಮಾರು 2.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ರವಿವಾರ ಟ್ರಸ್ಟ್‌ನ ವಠಾರದಲ್ಲಿ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರ ಮಧ್ಯೆ ಧ್ವೇಷ ವಿಷ ಬೀಜ ಬಿತ್ತಿ ಅವರನ್ನು ಜೈಲು ಸೇರುವಂತೆ ಮಾಡಲಾಗುತ್ತದೆ. ಪಾಕಿಸ್ತಾನಿಗಳು ಕೆಲವು ರಾಜ್ಯದಲ್ಲಿ ಡ್ರಗ್ಸ್ ಮೊದಲಾದ ಮಾದಕ ಪದಾರ್ಥಗಳನ್ನು ನೀಡುತ್ತ ಮಕ್ಕಳು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಭಯೋತ್ಪಾದನೆಗೆ ಪ್ರಚೋದನೆ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾಭಿಮಾನಿ ಗಳಾಗಿಸುವ ಮೂಲಕ ಇದರಿಂದ ದೂರ ಇರಿಸಬಹುದಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ ದೊರೆತು 70 ವರ್ಷ ಕಳೆದರೂ ಬಿಲ್ಲವ ಸಮುದಾಯದ ವರಿಗೆ ಸಾಮಾಜಿಕ ಮತುತಿ ಆರ್ಥಿಕ ನ್ಯಾಯ ದೊರೆಯಲಿಲ್ಲ. ಸಮಾಜದ ಮುಖ್ಯವಾಹಿನಿಯಲ್ಲಿ ಬಿಲ್ಲವ ಸಮುದಾಯದವರ ಸಂಖ್ಯೆ ಬಹಳ ಕಡಿಮೆಯಿದೆ. ಬಿಲ್ಲವರಲ್ಲಿ ಒಂದು ವರ್ಗ ಶ್ರೀಮಂತರಾಗಿದ್ದರೆ, ಮತ್ತೊಂದು ವರ್ಗ ತೀರ ಬಡತನದಲ್ಲೇ ಇದೆ. ಬಿಲ್ಲವರು ಕೂಡ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವ ಮೂಲಕ ತಮ್ಮ ಹಕ್ಕು ಚಲಾಯಿಸುವಂತಾಗಬೇಕು ಎಂದು ಅವರು ತಿಳಿಸಿದರು.

ದೇಶದಲ್ಲಿ ಎಲ್ಲಾ ಸಮುದಾಯದ ಜನರಿಗೆ ಶಿಕ್ಷಣ ದೊರೆಯಬೇಕು. ವೌಲ್ಯಾಧಾರಿತ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದ ಅವರು, ಬಿಲ್ಲವ ಸಮುದಾಯಕ್ಕೆ ಸಮುದಾಯ ಭವನದ ಅವಶ್ಯಕತೆ ಇದ್ದು, ಇದರ ನಿರ್ಮಾಣಕ್ಕಾಗಿ 25 ಲಕ್ಷ ರೂ. ನೀಡಲಾಗು ವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಮುದಾಯ ಭವನಗಳು ಸಮಾಜಕ್ಕೆ ಶಕ್ತಿ ತುಂಬುವಂತಾಗ ಬೇಕು. ಬಿಲ್ಲವ ಸಮುದಾಯದ ಜನತೆಗೆ ಮತ್ತೊಬ್ಬರ ಹಂಗಿಲ್ಲದೇ ತಮ್ಮ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ನೆರವಾಗುವಂಥ ಸಮು ದಾಯ ಭವನದ ಅಗತ್ಯತೆ ಇದೆ ಎಂದು ತಿಳಿಸಿದರು.

ಹೊಸ್ಮಾರು ಬಲ್ಯೊಟ್ಟು ಮಠದ ಶ್ರೀವಿಖ್ಯಾತಾನಂದ ಸ್ವಾಮೀಜಿ ಆಶೀರ್ವ ಚನ ನೀಡಿದರು. ಮಾಜಿ ಶಾಸಕ ಕೆ.ರಘುಪತಿ ಭಟ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪ್ರಭಾಕರ ಪೂಜಾರಿ, ಬಿ.ಬಿ.ಪೂಜಾರಿ, ಬಿಲ್ಲವರ ಸೇವಾ ಟ್ರಸ್ಟ್ ಅಧ್ಯಕ್ಷ ರಂಜನ್ ಕೆ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News