×
Ad

ಪೊಲ್ಯರಿಗೆ ಕರ್ನೂರು ಪ್ರಶಸ್ತಿ ಪ್ರದಾನ

Update: 2017-04-09 18:51 IST

ಮಂಗಳೂರು, ಎ.9: ಕರ್ನಾಟಕ ಕಲಾಸಂಪದ ಬೆಂಗಳೂರು ಆಶ್ರಯದಲ್ಲಿ ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಸಂಘಟಕ ಮತ್ತು ಮೇಳದ ಯಜಮಾನ ದಿ. ಕರ್ನೂರು ಕೊರಗಪ್ಪ ರೈ ಸ್ಮರಣಾರ್ಥ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಂಕು-ಬಡಗು ತಿಟ್ಟಿನ ಸವ್ಯಸಾಚಿ ಯಕ್ಷಗಾನ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರಿಗೆ 2016-17ನೆ ಸಾಲಿನ ‘ಕರ್ನೂರು ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭ ಪ್ರೇಮಾ ಆರ್. ಶೆಟ್ಟಿ ಕುತ್ಯಾರು ಮತ್ತು ಮುಕ್ತಾ ಉದಯರಾಜ್ ಶೆಟ್ಟಿಯವರಿಗೆ ‘ಕಲಾ ಸಂಪದ ವಿಶೇಷ ಪ್ರಶಸ್ತಿ’, ಕಲಾ ಪೋಷಕರಾದ ಆನಗಳ್ಳಿ ಕರುಣಾಕರ ಹೆಗ್ಡೆ, ದಿನೇಶ್ ವೈದ್ಯ ಅಂಪಾರು ಹಾಗೂ ರಂಗಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ, ಡಿ. ಮನೋಹರ ಕುಮಾರ್, ಸುರೇಶ್ ಶೆಟ್ಟಿ ಶಂಕರನಾರಾಯಣ, ಪುರುಷೋತ್ತಮ ಚೆಂಡ್ಲಾ, ಅರವಿಂದ ಬೋಳಾರ್ ದಂಪತಿಗೆ ‘ಕರ್ನಾಟಕ ಕಲಾ ಸಂಪದ ಪ್ರಶಸ್ತಿ - 2017’ ಪ್ರದಾನಿಸಿ ಸನ್ಮಾನಿಸಲಾಯಿತು.

ಕಲಾಸಂಘಟಕ ಕರ್ನೂರು ಸುಭಾಷ್ ರೈ ಸಂಯೋಜಿಸಿದ ‘ಕರ್ನೂರು ಒಂದು ನೆನಪು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾರ್ಕೂರು ಮಹಾ ಸಂಸ್ಥಾನ ಪೀಠಾಧ್ಯಕ್ಷ ವಿದ್ಯಾ ವಾಚಸ್ಪತಿ ಡಾ. ವಿಶ್ವ ಸಂತೋಷ ಭಾರತಿ ‘ಯಕ್ಷಗಾನವು ಪೌರಾಣಿಕ ಮೌಲ್ಯಗಳನ್ನು ಜನರಿಗೆ ತಲಪಿಸುವ ನಾಡಿನ ಶ್ರೇಷ್ಠ ಕಲೆ. ಅದಕ್ಕಾಗಿ ದುಡಿಯುವ ಕಲಾವಿದರು, ಸಂಘಟಕರು ಸದಾ ಸ್ಮರಣೀಯರು’ ಎಂದರು.

ಇಶಾ ಡಯಾಗ್ನೆಸ್ಟಿಕ್‌ನ ಡಾ. ಕಿಶೋರ್ ಆಳ್ವ ಅಧ್ಯಕ್ಷತೆ ವಸಿದ್ದರು. ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ದಿ. ಕರ್ನೂರು ಕೊರಗಪ್ಪ ರೈಯವರ ಬಗ್ಗೆ ಸಂಸ್ಮರಣಾ ಭಾಷಣ ಮಾಡಿದರು.

ಕೆ.ಎಸ್. ಆಗ್ರೋ ಕೆಮಿಕಲ್ಸ್‌ನ ಶಶಿಧರ ಶೆಟ್ಟಿ, ಸ್ಮಾರ್ಟ್‌ವೇ ಗ್ರೂಪ್‌ನ ಅಶೋಕ್ ಬಾಬು, ಎಂ.ಜೆ. ಪ್ರವೀಣ್ ಭಟ್, ಸಂಗೀತ ನಿರ್ದೇಶಕ ಗುರುಕಿರಣ್, ನಟ ಶಿವಧ್ವಜ್, ಬೆಂಗಳೂರು ತುಳುಕೂಟ ಅಧ್ಯಕ್ಷ ಜಯರಾಮ ಸೂಡಾ, ಮಹಾಲಕ್ಷ್ಮೀಪುರ ಕಸಾಪ ಅಧ್ಯಕ್ಷ ಎಚ್.ಎಸ್. ರಾಘವೇಂದ್ರ ಶೆಟ್ಟಿ, ರಾಜ್ ಗುರು ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಬಾಬು ಸಿಂಗ್ ರಾಜ್‌ಪುತ್ ಮುಖ್ಯ ಅತಿಥಿಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News