×
Ad

ಭದ್ರಕ್ ಕೋಮು ಘರ್ಷಣೆ: ಕರ್ಫ್ಯೂ ಮುಂದುವರಿಕೆ

Update: 2017-04-09 19:21 IST

ಭದ್ರಕ್,ಎ.9: ಈ ವಾರದ ಆದಿಯಲ್ಲಿ ಇಲ್ಲಿ ನಡೆದಿದ್ದ ಕೋಮು ಘರ್ಷಣೆಗಳ ಕುರಿತು ಒಡಿಶಾ ಕ್ರೈಂ ಬ್ರಾಂಚ್ ಪೊಲೀಸರು ತನಿಖೆಯನ್ನಾರಂಭಿಸಿದ್ದಾರೆ. ಇದೇ ವೇಳೆ ನಗರದಲ್ಲಿ ಜಾರಿಯಿರುವ ಕರ್ಫ್ಯೂವನ್ನು ಸೋಮವಾರ ಬೆಳಿಗ್ಗೆ ಎಂಟು ಗಂಟೆಯವರೆಗೆ ವಿಸ್ತರಿಸಲಾಗಿದೆ. ಇಂದು ಬೆಳಿಗ್ಗೆ ಕೆಲವು ಗಂಟೆಗಳ ಕಾಲ ಕರ್ಫ್ಯೂವನ್ನು ಸಡಿಲಿಸಲಾಗಿತ್ತು.

 ರಾಮನವಮಿ ಸಂದರ್ಭದಲ್ಲಿ ರಾಮ-ಸೀತೆಯರನ್ನು ಅವಮಾನಿಸಿದ್ದ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಬಳಿಕ ಎರಡು ಕೋಮುಗಳ ನಡುವೆ ನಡೆದಿದ್ದ ಘರ್ಷಣೆಗಳಿಗೆ ಸಂಬಂಧಿಸಿದಂತೆ 35 ಜನರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ವಿಹಿಂಪ ಮತ್ತು ಬಜರಂಗ ದಳ ಕಾರ್ಯಕರ್ತರು ಘರ್ಷಣೆಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ತನ್ಮಧ್ಯೆ ಭದ್ರಕ್ ಜಿಲ್ಲಾಧಿಕಾರಿ ಎಲ್.ಎನ್ ಮಿಶ್ರಾರನ್ನು ನವೀನ್ ಪಟ್ನಾಯಕ್ ನೇತೃತ್ವದ ರಾಜ್ಯ ಸರಕಾರವು ಎತ್ತಂಗಡಿ ಮಾಡಿದ್ದು, ಕಟಕ್ ಮಹಾನಗರ ಪಾಲಿಕೆಯ ಆಯುಕ್ತ ಜ್ಞಾನರಂಜನ್ ದಾಸ್ ಅವರು ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪರಿಸ್ಥಿತಿಯ ಮೇಲೆ ನಿಗಾಯಿರಿಸಲು ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಫೇಸ್ ಬುಕ್‌ನಲ್ಲಿ ಹಿಂದು ದೇವತೆಗಳ ಕುರಿತು ಅವಹೇಳನಕಾರಿ ಟೀಕೆಗಳು ಪೋಸ್ಟ್ ಆದ ಬಳಿಕ ಎ.6ರಂದು ಘರ್ಷಣೆಗಳು ಭುಗಿಲೆದ್ದಿದ್ದವು. ಕನಿಷ್ಠ ನಾಲ್ವರು ಪೊಲೀಸ್ ಸಿಬ್ಬಂದಿಗಳೂ ಗಾಯಗೊಂಡಿದ್ದರು. ನಿಷೇಧಾಜ್ಞೆಯ ಬಳಿಕ ಅಂತಿಮವಾಗಿ ಕರ್ಫ್ಯೂ ಹೇರಲಾಗಿತ್ತು.

 ನಗರದಲ್ಲಿ ಬಂದೋಬಸ್ತ್‌ಗಾಗಿ 35 ಪೊಲೀಸ್ ಪ್ಲಟೂನ್‌ಗಳನ್ನು ನಿಯೋಜಿಸ ಲಾಗಿದೆ. ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News