ಹೆಜಮಾಡಿಯಲ್ಲಿ "ಔಟ್" ಆದ ಕೋಮುದ್ವೇಷ!
ಪಡುಬಿದ್ರೆ, ಎ.9: ಎಂಟು ತಂಡಗಳು, ಎಲ್ಲಾ ತಂಡಗಳಲ್ಲೂ ಎಲ್ಲಾ ಧರ್ಮ, ಜಾತಿಯವರಿಗೂ ಅವಕಾಶ, ಐಪಿಎಲ್‌ಗೂ ಸವಾಲೊಡ್ಡಿದ ಮಾದರಿ ಕ್ರೀಡಾಕೂಟ, ಸರ್ವಧರ್ಮೀಯರ ಮನಗೆದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆದದ್ದು ಗ್ರಾಮೀಣ ಪ್ರದೇಶವಾದ ಹೆಜಮಾಡಿಯಲ್ಲಿ.
ಕ್ರೀಡೆ ಶಾಂತಿ, ಸೌಹಾರ್ದತೆಯ ಸಂಕೇತ. ಆದರೆ ಅದೇ ಕ್ರೀಡೆಗಳಿಂದಾಗಿ ಇಂದು ಕೆಲವಡೆಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೊಂದು ಪರಿಹಾರ ಕಂಡುಕೊಂಡು ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಉಳಿಯಬೇಕು ಎನ್ನುವ ದೃಷ್ಟಿಕೋನದೊಂದಿಗೆ ಹೆಜಮಾಡಿ ಫ್ರೆಂಡ್ಸ್ "ಹೆಜಮಾಡಿ ಪ್ರೀಮಿಯರ್ ಲೀಗ್" ಹೆಸರಿನಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಕೂಟವನ್ನು ನಡೆಸಿ ಎಲ್ಲರ ಗಮನಸೆಳೆದಿದ್ದಾರೆ.
ಹೆಜಮಾಡಿ, ಪಲಿಮಾರು ಮತ್ತು ನಡ್ಸಾಲು ಗ್ರಾಮಗಳನ್ನೊಳಗೊಂಡ ಹೆಜಮಾಡಿ ಗ್ರಾಮದ ವ್ಯಾಪ್ತಿಗೊಳಪಟ್ಟ ವಿವಿಧ ಧರ್ಮಗಳ ಆಟಗಾರರು ಸೌಹಾರ್ದ ಕ್ರಿಕೆಟ್ ಟ್ರೋಫಿಯಲ್ಲಿ ಭಾಗವಹಿಸಿದ್ದರು.
ಪಂದ್ಯಾಟದ ವಿಶೇಷತೆಗಳು: ಕಡ್ಡಾಯವಾಗಿ 8 ತಂಡಗಳ ಆಟಗಾರರು ಹೆಜಮಾಡಿ ಗ್ರಾಮ ವ್ಯಾಪ್ತಿಯವರಾಗಿರಬೇಕು. ಯಾವುದೇ ತಂಡದಲ್ಲಿ ಒಂದು ಧರ್ಮದ 7 ಜನ ಆಟಗಾರರು ಮಾತ್ರ ಇರಬೇಕು. ಉಳಿದ 4 ಆಟಗಾರರು ಬೇರೆ ಧರ್ಮದವರಾಗಿರಬೇಕು. ಅಂದರೆ ಪ್ರತಿಯೊಂದು ತಂಡದಲ್ಲಿ ಎಲ್ಲಾ ಧರ್ಮದವರು ಇರಲೇಬೇಕು. ಇದರಿಂದ ಪ್ರತಿಯೊಂದು ತಂಡದಲ್ಲೂ ಮೊಗವೀರ, ಮುಸ್ಲಿಮ್, ಬಿಲ್ಲವ, ಬಂಟ, ಕ್ರಿಶ್ಚಿಯನ್, ಕೊರಗ, ಕೊಂಕಣಿ-ಹೀಗೆ ಎಲ್ಲಾ ಧರ್ಮ ಹಾಗೂ ಜಾತಿಯ ಆಟಗಾರರು ಇರುವಂತಾಯಿತು.
ಪಂದ್ಯಾಟದ ಎಲ್ಲಾ 8 ತಂಡಗಳಿಗೂ ಪ್ರಾಯೋಜಕರಿದ್ದರು. 8 ಓವರ್‌ನ ಎರಡು ದಿನಗಳ ಪಂದ್ಯಾಟಕ್ಕೆ ಪ್ರತಿಯೊಂದು ಪ್ರಾಯೋಜಕರೂ ಖರ್ಚು ಮಾಡಿದ್ದಾರೆ. ತಂಡದ ಆಟಗಾರರ ಜರ್ಸಿ, ಬೆಂಬಲಿಗರಿಗೂ ಅದೇ ಬಣ್ಣದ ಜರ್ಸಿ, ತಂಡದ ಬಾವುಟ, ಸ್ಟಿಕ್ಕರ್ ನೀಡಿದ್ದಲ್ಲದೆ ತಂಡದ ಆಟಗಾರರನ್ನು ಕರೆತರಲು ಪ್ರತ್ಯೇಕ ವಾಹನ ವ್ಯವಸ್ಥೆ, ಪ್ರತಿಯೊಂದು ಬೌಂಡರಿ ಸಿಕ್ಸರ್‌ಗಳಿಗೆ ಪಟಾಕಿ ಸಿಡಿಸಿ ಸಂಭ್ರಮ, ತಂಡಕ್ಕಾಗಿ ಪ್ರತ್ಯೇಕ ಹಾಡು- ಇವೆಲ್ಲವೂ ಐಪಿಎಲ್ ಪಂದ್ಯಾಟಕ್ಕೆ ಸವಾಲೆಸೆದಂತಿತ್ತು.
- ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರಿಕೆಟ್‌ಗೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೊನಲು ಬೆಳಕಿನ ರಾಜ್ಯ ರಾಷ್ಟ್ರೀಯ ಕ್ರಿಕೆಟ್ ಗಳಿಗೂ ಪ್ರೇಕ್ಷಕರು ಬರುತ್ತಿಲ್ಲ. ಆದರೆ ಕೇವಲ ಹೆಜಮಾಡಿಯವರಿಗಾಗಿ ನಡೆಸಿದ ಸೌಹಾರ್ದ ಟ್ರೋಫಿ ಪಂದ್ಯಾಟಕ್ಕೆ ಹತ್ತು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು, ಕ್ರೀಡಾ ಪ್ರೇಮಿಗಳ ಗಮನಸೆಳೆಯುವಂತೆ ಮಾಡಿತು.
- ಗ್ರಾಮಸ್ಥರ ಮೆಚ್ಚುಗೆ: ಕೋಮು ಸೌಹಾರ್ದತೆ ಉದ್ದೇಶದಿಂದ ವಿಭಿನ್ನವಾಗಿ ನಡೆಸಿದ ಈ ಪಂದ್ಯಾಟದ ಬಳಿಕ ಆಯೋಜಕರಿಗೆ ಪ್ರಶಂಸೆಯ ಸುರಿಮಳೆಯೇ ದೊರಕಿದೆ. ಯುವಕರ ಉತ್ಸಾಹ ಕಂಡು ನಿಬ್ಬೆರಗಾದ ಗ್ರಾಮದ ಹಿರಿಯರು ಸಂಘಟಕರಿಗೆ ಹ್ಯಾಟ್ಸಪ್ ಹೇಳಿದ್ದಲ್ಲದೆ ಮುಂದೆ ಪ್ರತಿಬಾರಿ ಪಂದ್ಯಾಟ ನಡೆಸುವಂತೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಮುಂದಿನ ಬಾರಿ ಈ ಪಂದ್ಯಾಟವನ್ನು ಗ್ರಾಮದ ಹಬ್ಬವನ್ನಾಗಿ ಮಾಡೋಣವೆಂದು ಹುರಿದುಂಬಿಸಿದ್ದಾರೆ.
ಬಶೀರ್ ಹಸನ್ ಮಾಲಕತ್ವದ ಹೆಜಮಾಡಿ ಕೋಡಿಯ ಸ್ಟಾರ್ ತಂಡವು ಫೈನಲ್‌ನಲ್ಲಿ ಬಿ.ಎಂ.ಖಾದರ್ ಮಾಲಕತ್ವದ ಕನ್ನಂಗಾರ್ ಮಾಸ್ಟರ್ಸ್ ತಂಡವನ್ನು ಸೋಲಿಸಿ ಸೌಹಾರ್ದ ಟ್ರೋಫಿಯೊಂದಿಗೆ 15,000 ರೂ. ಜಯಿಸಿದರೆ, ದ್ವಿತೀಯ ಸ್ಥಾನ ಗಳಿಸಿದ ಕನ್ನಂಗಾರ್ ಮಾಸ್ಟರ್ಸ್ ಟ್ರೋಫಿಯೊಂದಿಗೆ 10,000 ರೂ.ಗಳನ್ನು ತನ್ನದಾಗಿಸಿತು.
ಗ್ರಾಮದ ಹಿರಿಯರಾದ ಮೊಯ್ದು ಹಾಜಿ ಬಿಲೀಫ್ ಮತ್ತು ಅಬೂಬಕರ್ ಸ್ಮಾರ್ಟ್ ಟೆಕ್ ಟೂರ್ನಿಯನ್ನು ಉದ್ಘಾಟಿಸಿದರು. ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ ಮುಖ್ಯ ಅತಿಥಿಯಾಗಿದ್ದರು. ಪಡುಬಿದ್ರೆ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ತಾಪಂ ಸದಸ್ಯೆ ರೇಣುಕಾ ಪುತ್ರನ್, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಸದಸ್ಯ ಗೋವರ್ಧನ್ ಕೋಟ್ಯಾನ್, ಯುವ ಮುಖಂಡ ಗುಲಾಂ ಮುಹಮ್ಮದ್, ನಾರಾಯಣ ಎಸ್. ಪೂಜಾರಿ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.
ತಂಡ ಹಾಗೂ ತಂಡದ ಮಾಲಕರು:
- ಸೌತ್ ಸುಲ್ತಾನ್ಸ್ (ಆಸಿಫ್ ಅಬ್ಬಾಸ್), ಬಸ್ತಿಪಡ್ಪು ಬ್ಲಾಸ್ಟರ್ಸ್ (ಸಂದೇಶ್ ಶೆಟ್ಟಿ), ನಾರ್ತರ್ನ್ ರೋಯಲ್ಸ್ (ಹುಸೈನ್), ಅವರಾಲ್ ಅಟ್ಯಾಕರ್ಸ್ (ಹಕೀಂ), ಬೈಪಾಸ್ ಬುಲೆಟ್ಸ್ (ಶರೀಫ್), ಕಿಂಗ್ಸ್ ಕೋಡಿ (ರವಿ ಎಚ್.ಕುಂದರ್) ಇತರ ತಂಡಗಳು.
- ಪಂದ್ಯಾಟ ಆರಂಭಕ್ಕೆ ಮುನ್ನ ವಾಟ್ಸಾಪ್ ಮತ್ತು ಫೇಸ್ಬುಕ್ ಮೂಲಕ ಎಂಟು ತಂಡಗಳನ್ನು ಪ್ರಕಟಿಸಿ ಪ್ರಬಲ ತಂಡಗಳ ಆಯ್ಕೆ ಬಗ್ಗೆ ಆನ್‌ಲೈನ್ ಓಟಿಂಗ್ ನಡೆಸಿದ್ದು, ಸಾವಿರಾರು ಅಭಿಮಾನಿಗಳು ಓಟಿಂಗ್ ನಡೆಸಿದ್ದರು.
ಕಾರ್ಯಕ್ರಮದ ಸಂಘಟಕ ಸೈಯದ್ ಅಹ್ಮದ್ ಹೆಜಮಾಡಿ