ಜಿಲ್ಲಾಧಿಕಾರಿ ಕೊಲೆಯತ್ನ: ಮತ್ತೆ ಆರು ಮಂದಿಯ ಬಂಧನ
ಉಡುಪಿ, ಎ.9: ಕಂಡ್ಲೂರಿನಲ್ಲಿ ನಡೆದ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಂಡ್ಲೂರಿನ ಶುಕೂರ್(48), ಅರಫಾತ್(23), ವೌಸೀನ್ (23), ರಾಘವೇಂದ್ರ ಆಚಾರ್ಯ(36), ಯಾಸೀನ್(20), ಫಯಾಝ್ ಅಹ್ಮದ್(22) ಎಂದು ಗುರುತಿಸಲಾಗಿದೆ.
ಬಂಧಿತರನ್ನು ಉಡುಪಿ ನ್ಯಾಯಾಧೀಶರ ಮನೆ ಮುಂದೆ ಹಾಜರುಪಡಿಸಲಾಗಿದ್ದು, ಎಲ್ಲರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 21ಕ್ಕೆ ಏರಿದೆ. ಇದರಲ್ಲಿ ಓರ್ವ ಬಾಲಾಪರಾಧಿಯಾಗಿದ್ದು, ಇನ್ನೋರ್ವ ಆರೋಪಿ ಗಾಯಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಾಯಕರ ಬಂಧನ ಆರೋಪ
ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಬಂಧಿತರ ಪೋಷಕರು ಇಂದು ಉಡುಪಿ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
"ಇಂದು ಪೊಲೀಸರಿಂದ ಬಂಧಿಸಲ್ಪಟ್ಟವರಲ್ಲಿ ಯಾಸೀನ್, ಮೌಸೀನ್, ಅರಫಾತ್, ಫಯಾಝ್ ನಿರಪರಾಧಿಗಳು. ಅವರು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರಿಗೆ 50 ಮಂದಿಯನ್ನು ಬಂಧಿಸಬೇಕಾಗಿದೆ. ಅದಕ್ಕಾಗಿ ಸಿಕ್ಕಿದವರನ್ನು ಬಂಧಿಸುತ್ತಿದ್ದಾರೆ. ನಮ್ಮ ಮಕ್ಕಳು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದಾರೆ. ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಅಮಾಯಕರಾದ ನಮ್ಮ ಮಕ್ಕಳನ್ನು ಕೂಡಲೇ ಬಿಡುಗಡೆ ಮಾಡಬೇಕು" ಎಂದು ಪೋಷಕರಾದ ಸುಬಾನ್, ದಿಲ್ಶಾದ್ ಆರೋಪಿಸಿದರು.