×
Ad

ಲಾರಿ ಚಾಲಕನಿಗೆ ಇರಿದು ಹಣ ಲೂಟಿಗೈದ ದರೋಡೆಕೋರರು

Update: 2017-04-09 23:19 IST

ಬೆಳ್ತಂಗಡಿ, ಎ.9: ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಶಿರಾಡಿ ಸಮೀಪದ ಎಂಜಿರ ಎಂಬಲ್ಲಿ ಸಿಮೆಂಟ್ ಮೂಟೆಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಯೊಂದನ್ನು ಅಡ್ಡಗಟ್ಟಿ ಚಾಲಕನಿಗೆ ಚೂರಿಯಿಂದ ಇರಿದು ಆತನ ಬಳಿಯಿದ್ದ  17 ಸಾವಿರ ರೂ. ಮತ್ತು ಮೊಬೈಲನ್ನು ಕದ್ದೊಯ್ದ ಘಟನೆ ಶನಿವಾರ ತಡರಾತ್ರಿ ವೇಳೆ ನಡೆದಿದೆ,

ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಚಿಕ್ಕಮಗಳೂರಿನ ಅಂಬ್ಲೆ ಗ್ರಾಮದ ಪಾಂಡುರಂಗ ಎಂಬವರ ಮಗ ರಾಘವೇಂದ್ರ ( 32) ಎಂಬಾತ ಹಲ್ಲೆಗೊಳಗಾದ ಸಿಮೆಂಟ್ ಲಾರಿಯ ಚಾಲಕನಾಗಿದ್ದು, ಮಂಗಳೂರಿಗೆ ಲೋಡನ್ನು ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಯಾಳು ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಕೆಂಪು ಬಣ್ಣದ ಕಾರೊಂದರಲ್ಲಿ ಅಂದಾಜು 5 ಮಂದಿಯಿದ್ದ ದರೋಡೆಕೋರರ ತಂಡ ಸಕಲೇಶಪುರದ ಸಮೀಪದಿಂದಲೇ ಈ ಲಾರಿಯಲ್ಲಿ ಚಾಲಕನೋರ್ವ ಮಾತ್ರ ಇರುವುದನ್ನು ಖಾತ್ರಿಪಡಿಸಿ ಹಿಂಬಾಲಿಸಿಕೊಂಡು ಬಂದಿರಬೇಕೆನ್ನುವ ಸಂಶಯ ವ್ಯಕ್ತವಾಗಿದೆ. ಈ ಘಟನೆ ನಡೆಯುತ್ತಿದ್ದ ವೇಳೆಯಲ್ಲಿ ಈ ಹೆದ್ದಾರಿಯಲ್ಲೇ ಸಂಚರಿಸಿದ್ದ ಕೆಲವೊಂದು ವಾಹನಗಳ ಚಾಲಕರು ಇದೇ ಘಟನೆ ನಡೆದ ವೇಳೆ ಈ ಲಾರಿಯಿಂದ ಅನತಿ ದೂರದಲ್ಲಿ ಕಾರೊಂದು ನಿಂತಿರುವುದನ್ನು ಕಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ನಡೆದ ವಿಷಯ ತಿಳಿಯುತ್ತಲೇ ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಠಾಣಾ ಉಪನಿರೀಕ್ಷಕ ರಾಮ ನಾಯ್ಕಿ , ಮತ್ತು ಪೋಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News