×
Ad

ವೇಣೂರು: ದೇವಸ್ಥಾನ-ಬಸದಿಯಲ್ಲಿ ಕಳ್ಳತನ

Update: 2017-04-09 23:23 IST

ಬೆಳ್ತಂಗಡಿ, ಎ.9: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಶಾಂತಿನಾಥಸ್ವಾಮಿ ಕಲ್ಲು ಬಸದಿಗೆ ಶನಿವಾರ ರಾತ್ರಿ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಗಳನ್ನು ಕಳವುಗೈದ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎಡಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮಹಾಗಣಪತಿ ಮತ್ತು ಜನಾರ್ದನ ಸ್ವಾಮಿಯ ದೇವರ ಎದುರಿಗಿದ್ದ 2 ಕಾಣಿಕೆ ಡಬ್ಬಿ ಹಾಗೂ ದೇವಳದ ಮುಂಭಾಗದಲ್ಲಿದ್ದ ಜೀರ್ಣೋದ್ಧಾರದ ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಂಪ್ಯೂಟರ್ ಹಾಗೂ ಸುಮಾರು 1,500 ರೂ. ದೋಚಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಗೆ ತಂದ 3 ಕಾಣಿಕೆ ಹುಂಡಿಗಳನ್ನು ದೇವಸ್ಥಾನದ ಎಡ ಬದಿಯ ಗದ್ದೆಗೆ ಕೊಂಡೊಯ್ದು ಅಲ್ಲಿ ಅದರ ಬೀಗ ಹೊಡೆದು ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಇಲ್ಲಿನ ಕಲ್ಲುಬಸದಿಯ ಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನು ಒಡೆದು ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. 2 ಕಾಣಿಕೆ ಡಬ್ಬಿಗಳನ್ನು, ಬಸದಿಯ ಹೊರಗಿದ್ದ ಬ್ಯಾಟರಿ ಹಾಗೂ ಇನ್‌ವರ್ಟರ್‌ನ್ನು ಕಳ್ಳರು ಕದ್ದೊಯ್ದಿದ್ದಾರೆ. ಎರಡು ಕಡೆಗಳಲ್ಲೂ ಸಿಸಿ ಕ್ಯಾಮರ ಇದ್ದರೂ ಕಳ್ಳರು ಇಲ್ಲಿನ ದೃಶ್ಯಾವಳಿಗಳು ಸೆರೆಯಾಗದಂತೆ ಅದನ್ನು ತಿರುಗಿಸಿರುವುದಾಗಿ ತಿಳಿದು ಬಂದಿದೆ.

ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಬಳಿಕ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ರವಿವಾರ ಬೆಳಿಗ್ಗೆ ಅರ್ಚಕರು ಪೂಜೆಗೆಂದು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳತನ ಸಂದರ್ಭ ಮುಖಕ್ಕೆ ಮುಸುಕು ಧರಿಸಿದ್ದರು ಎಂದು ತಿಳಿದು ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News