×
Ad

ತೊಗರಿಬೇಳೆ ಪೂರೈಸದ ಗುತ್ತಿಗೆದಾರರಿಗೆ ನೋಟಿಸ್: ಸಚಿವ ಖಾದರ್

Update: 2017-04-10 18:06 IST

ಮಂಗಳೂರು, ಎ.10: ಪಡಿತರ ಚೀಟಿದಾರರಿಗೆ ತೊಗರಿಬೇಳೆ ಪೂರೈಸಲು ರಾಜ್ಯ ಸರಕಾರ ಬದ್ಧವಾಗಿದೆ. ಆದರೆ, ಪ್ರತೀ ಜಿಲ್ಲೆಯ ಆಹಾರ ಗೋದಾಮುಗಳಿಗೆ ತೊಗರಿಬೇಳೆ ಪೂರೈಸುವ ಗುತ್ತಿಗೆ ವಹಿಸಿಕೊಂಡವರು ನಾನಾ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುವುದು. ಎ.15ರೊಳಗೆ ತೊಗರಿಬೇಳೆ ಪೂರೈಸದಿದ್ದರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.

ಸೋಮವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರರ ನಿರ್ಲಕ್ಷದಿಂದ ಈ ತಿಂಗಳಲ್ಲಿ ಪಡಿತರದಾರರಿಗೆ ತೊಗರಿಬೇಳೆ ವಿತರಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸುಮಾರು 15 ಮಂದಿ ತೊಗರಿಬೇಳೆ ಪೂರೈಸಲು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದರು. ಆ ಪೈಕಿ 10 ಮಂದಿ ಇದೀಗ ಟೆಂಡರ್ ಪಡೆಯುವಾಗ ಎಲ್ಲ ಷರತ್ತುಗಳಿಗೆ ಒಪ್ಪಿದ್ದ ಗುತ್ತಿಗೆದಾರರು ಬಳಿಕ ಪೂರೈಕೆ ಮಾಡಲು ನಿರಾಕರಿಸುತ್ತಿದ್ದಾರೆ. ಅವಧಿ ಮುಕ್ತಾಯಗೊಳ್ಳುವವರೆಗೆ ಕಾದು ಬಳಿಕ ಮರುಟೆಂಡರ್ ಕರೆಯಲಾಗುವುದು. ಅಲ್ಲದೆ ಷರತ್ತು ಉಲ್ಲಂಘಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರಲ್ಲದೆ, ಸರಕಾರವೇ ನೇರವಾಗಿ ರೈತರಿಂದ ತೊಗರಿಬೇಳೆ ಖರೀದಿಸಿ ಪಡಿತರದಾರರಿಗೆ ಪೂರೈಸುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದರು.

ಪಡಿತರ ಚೀಟಿ ಅರ್ಜಿದಾರರಿಗೆ ಕಿರುಕುಳ ಬೇಡ: ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುವ ಬಗ್ಗೆ ದೂರುಗಳು ಬಂದಿವೆ. ಯಾವ ಕಾರಣಕ್ಕೂ ಈ ಕಿರುಕುಳ ಸಹಿಸಲು ಸಾಧ್ಯವಿಲ್ಲ. ಅರ್ಜಿದಾರರು ಸ್ವಯಂಘೋಷಿತ ಆದಾಯ ಪ್ರಮಾಣಪತ್ರ ಸಲ್ಲಿಸಿದರೆ ಅದನ್ನೇ ದಾಖಲೆ ಎಂದು ಪರಿಗಣಿಸಿ ನಿಗದಿತ ಸಮಯದೊಳಗೆ ಪಡಿತರ ಚೀಟಿ ವಿತರಿಸಬೇಕು. 1 ವರ್ಷದೊಳಗೆ ಈ ಬಗ್ಗೆ ಪರಿಶೀಲನೆ ನಡೆಸಿ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ನೀಡಲು ಅವಕಾಶವಿದೆ ಎಂದು ಖಾದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News