ಹಕ್ಕುಪತ್ರ ನೀಡಲು ಆಗ್ರಹಿಸಿ ತಣ್ಣೀರುಬಾವಿ ಬೀಚ್ ನಿವಾಸಿಗಳ ಧರಣಿ
ಮಂಗಳೂರು, ಎ.10: ಹಕ್ಕುಪತ್ರ ಮತ್ತು ಮನೆ ನಂಬರ್ ನೀಡುವಂತೆ ಆಗ್ರಹಿಸಿ ನಗರ ಹೊರವಲಯದ ತಣ್ಣೀರುಬಾವಿ ಬೀಚ್ ನಿವಾಸಿಗಳು ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಡಿವೈಎಫ್‌ಐ-ಸಿಪಿಎಂ ತಣ್ಣೀರುಬಾವಿ ಘಟಕದ ನೇತೃತ್ವದಲ್ಲಿ ಧರಣಿ ನಡೆಸಿದರು.
ತಣ್ಣೀರುಬಾವಿ ಬೀಚ್‌ನಲ್ಲಿ ಕಳೆದ ಹಲವಾರು ವರ್ಷದಿಂದ ದಲಿತರು, ಮುಸ್ಲಿಮರು, ಮೊಗವೀರ ಸಮುದಾಯದ ಸಾವಿರಾರು ಮಂದಿ ವಾಸಿಸುತ್ತಿದ್ದಾರೆ. ಆದರೆ ಸರಕಾರ ಇನ್ನೂ ಭೂಮಿಯ ಹಕ್ಕುಪತ್ರ ಕೊಟ್ಟಿಲ್ಲ, ಮನೆ ನಂಬರ್ ನೀಡಿಲ್ಲ. ಇವೆರಡೂ ಸಿಗದ ಕಾರಣ ಸರಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಎಂ ಮುಖಂಡರಾದ ಕೃಷ್ಣಪ್ಪ ಕೊಂಚಾಡಿ, ಸುನೀಲ್ ಕುಮಾರ್ ಬಜಾಲ್, ಶಮೀನಾ ಬಾನು ಮಾತನಾಡಿದರು.
ಡಿವೈಎಫ್‌ಐ ಮುಖಂಡರಾದ ಬಿ.ಕೆ.ಇಮ್ತಿಯಾಝ್, ವಾಸುದೇವ ಉಚ್ಚಿಲ್, ಸಂತೋಷ್ ಬಜಾಲ್, ಸಂತೋಷ್ ಶಕ್ತಿನಗರ, ಕಿಶೋರ್ ಪೋರ್ಕೊಡಿ, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.