×
Ad

ಶಿಕ್ಷಣದ ಹಕ್ಕು ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ

Update: 2017-04-10 19:22 IST

ಹೊಸದಿಲ್ಲಿ, ಎ.10: ಶಿಕ್ಷಣದ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದ - ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿಂದು ಸರಕಾರ ಮಂಡಿಸಿತು. ಪ್ರಾಥಮಿಕ ಶಿಕ್ಷಕರಿಗೆ ಸೂಚಿಸಲಾಗಿರುವ ಕನಿಷ್ಠ ಅರ್ಹತೆಯನ್ನು ಗಳಿಸಿಕೊಳ್ಳುವ ಅವಕಾಶವನ್ನು 2019ರವರೆಗೆ ವಿಸ್ತರಿಸುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗುವುದು.

2010ರಿಂದ ಜಾರಿಗೆ ಬಂದಿರುವ ಹಾಲಿ ಕಾಯ್ದೆಯ ಪ್ರಕಾರ, 2015ರ ಮಾರ್ಚ್ 31ರ ಒಳಗೆ ಈ ಶಿಕ್ಷಕರು ಕನಿಷ್ಠ ಅರ್ಹತೆಯನ್ನು ಗಳಿಸಿಕೊಳ್ಳಬೇಕಿತ್ತು. ಆದರೆ ಸೇವೆಯಲ್ಲಿರುವ ತರಬೇತು ಪಡೆಯದಿರುವ ಪ್ರಾಥಮಿಕ ಶಿಕ್ಷಕರಿಗೆ ಸೂಕ್ತ ತರಬೇತಿ ಪ್ರಕ್ರಿಯೆಯನ್ನು ರಾಜ್ಯ ಸರಕಾರಗಳು ಮುಂದುವರಿಸಲು ಅಸಮರ್ಥರಾದ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು. ನಿಗದಿತ ಕಾಲಾವಧಿಯನ್ನು ವಿಸ್ತರಿಸುವಂತೆ ರಾಜ್ಯ ಸರಕಾರಗಳು ಮನವಿ ಮಾಡಿಕೊಂಡಿದ್ದವು ಎಂದು ಸಚಿವರು ತಿಳಿಸಿದ್ದಾರೆ.

6ರಿಂದ 14 ವರ್ಷದ ವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ಈ ತಿದ್ದುಪಡಿ ಮಸೂದೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಶಿಕ್ಷಕರಿಗೆ ನೀಡುವ ತರಬೇತಿ ಪ್ರಕ್ರಿಯೆಯ ವೆಚ್ಚವನ್ನು ಸರ್ವಶಿಕ್ಷಾ ಅಭಿಯಾನದ ಅನುದಾನದಲ್ಲಿ ಸೇರಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವೆಚ್ಚವನ್ನು ಹಂಚಿಕೊಳ್ಳಬೇಕು. ಶಿಕ್ಷಕರ ತರಬೇತಿಗೆ ಸುಮಾರು 453.62 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News