×
Ad

‘ಮಹಾವೀರರ ಸತ್ಯ, ಅಹಿಂಸೆ ಸಂದೇಶ ಇಂದಿಗೂ ಪ್ರಸ್ತುತ’

Update: 2017-04-10 20:37 IST

ಉಡುಪಿ, ಎ.10: ಸತ್ಯ, ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಬೋಧಿಸಿದ ಮಹಾವೀರ ಇಂದಿಗೂ ಪ್ರಸ್ತುತ. 2,600 ವರ್ಷಗಳ ಹಿಂದೆ ಬದುಕಿ, ಉತ್ತಮ ಬದುಕಿಗೆ ಮಾರ್ಗದರ್ಶನ ನೀಡಿದ ಅವರ ಸಂದೇಶಗಳು ನಮ್ಮನ್ನು ಉತ್ತಮ ಬದುಕಿಗೆ ಪ್ರೇರೇಪಿಸುತ್ತದೆ ಎಂದು ಅಪರ ಜಿಲ್ಲಾದಿಕಾರಿ ಅನುರಾಧ ಹೇಳಿದ್ದಾರೆ.

ಉದ್ಯಾವರ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಗೋಲ್ಡನ್ ಜ್ಯುಬಿಲಿ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹಾವೀರ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಿನ ಎಂದರೆ ಗೆದ್ದವನು ಎಂದರ್ಥ. ಬದುಕಿನ ಗಮ್ಯದೆಡೆಗೆ ತಲುಪಿ ಇತರರು ಅಲ್ಲಿ ತಲುಪಲು ನೆರವಾಗುವುದು, ಬದುಕಿನ ಅರ್ಥವನ್ನು ಹೇಳಿಕೊಡುವುದು, ಪ್ರಕೃತಿಯನ್ನು ಅರಿತು ಬಾಳುವುದರ ಅಗತ್ಯವನ್ನು ಮಹಾತ್ಮರು ನಮಗೆ ಬಹಳ ಹಿಂದಿನಿಂದಲೇ ಬೋಧಿಸಿದ್ದಾರೆ. ಇಂಥ ಉತ್ತಮ ಬೋಧನೆಗಳನ್ನು ಅಳವಡಿಸಿ ಕೊಂಡು ಬಾಳಬೇಕು ಎಂದವರು ನುಡಿದರು.

ಎಸ್‌ಡಿಎಂ ಸಮಾಜ ಕಾರ್ಯ ವಿಭಾಗದ ಸುವೀರ್ ಜೈನ್ ವಿಶೇಷ ಉಪನ್ಯಾಸ ನೀಡಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮರು ಕ್ರಮಿಸಿ ನೀಡಿದ ಜೀವನ ಪಾಠಗಳು ಮಾನವ ಜನಾಂಗವನ್ನು ಸದೃಢಗೊಳಿಸಲಿ ಎಂದರು. ಕಾರ್ಯಕ್ರಮದಲ್ಲಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಬಾಕರ ಉಪಾಧ್ಯಾಯ, ಭಾರತೀಯ ಜೈನ್ ಮಿಲನ್ ವಲಯ-8 ರ ಕಾರ್ಯಾಧ್ಯಕ್ಷ ಕೆ. ಪ್ರಸನ್ನಕುಮಾರ್, ಉಡುಪಿ ಜೈನ್ ಮಿಲನ್‌ನ ಜಿಲ್ಲಾಧ್ಯಕ್ಷ ವೈ.ಸುಧೀರ್ ಜೈನ್ ಉಪಸ್ಥಿತರಿದ್ದರು.

ತಹಶೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು, ಶಂಕರದಾಸ್ ಚಂಡ್ಕಳ ಕಾರ್ಯಕ್ರಮ ನಿರೂಪಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಮೇಲ್ವೀಚಾರಕರಾದ ಪೂರ್ಣಿಮ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News