ಉತ್ತರಪ್ರದೇಶ: ಐಪಿಎಸ್ ಅಧಿಕಾರಿಗಳ ಚರಾಸ್ತಿ ಪಟ್ಟಿ ನೀಡಲು ವಾರದ ಗಡುವು

Update: 2017-04-10 15:25 GMT

ಲಕ್ನೋ: ರಾಜ್ಯದ ಎಲ್ಲ ಐಪಿಎಸ್ ಅಧಿಕಾರಿಗಳು ತಮ್ಮ ಚರಾಸ್ತಿ ಪಟ್ಟಿಯನ್ನು ಏಪ್ರಿಲ್ 16ರ ಒಳಗಾಗಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.

ಎಲ್ಲ ರಾಜ್ಯ ಸರ್ಕಾರಿ ಅಧಿಕಾರಿಗಳು 15 ದಿನಗಳ ಒಳಗಾಗಿ ಎಲ್ಲ ಸ್ಥಿರ ಹಾಗೂ ಚರಾಸ್ತಿಗಳ ವಿವರ ನೀಡಬೇಕು ಎಂದು ಯೋಗಿ ಆದಿತ್ಯನಾಥ್ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ರಾಜ್ಯ ಸರ್ಕಾರಿ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಲು ವಿಧಿಸಿದ್ದ ಗಡುವನ್ನು ಸರ್ಕಾರ ಏಪ್ರಿಲ್ 15ರವರೆಗೆ ವಿಸ್ತರಿಸಿತ್ತು.

ಅಧಿಕಾರ ವಹಿಸಿಕೊಂಡ ತಕ್ಷಣ ನೂತನ ಸಿಎಂ ತಮ್ಮ ಎಲ್ಲ ಸಚಿವರು ಸ್ಥಿರ ಹಾಗೂ ಚರಾಸ್ತಿ ವಿವರ ನೀಡುವಂತೆ ಸೂಚಿಸಿದ್ದರು. ಶನಿವಾರ ಹೊರಡಿಸಿದ ಹೊಸ ಆದೇಶದ ಅನ್ವಯ ಐಪಿಎಸ್ ಅಧಿಕಾರಿಗಳನ್ನೂ ಈ ಆದೇಶದ ವ್ಯಾಪ್ತಿಗೆ ತರಲಾಗಿದೆ. ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಇಲ್ಲ ಎನ್ನುವುದು ಸರ್ಕಾರದ ನೀತಿಯಾಗಿದೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಿಬ್ಬಂದಿ_ ಪಿ.ಸಿ.ಮೀನಾ ಈ ಆದೇಶ ಹೊರಡಿಸಿದ್ದು ಎಲ್ಲ ಡಿಜಿಪಿಗಳು, ಐಜಿ ಹಾಗೂ ಡಿಐಜಿಗಳು ಇದಕ್ಕೆ ಬದ್ಧರಾಗಿರಬೇಕು ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಆದೇಶದ ಪ್ರತಿಯನ್ನು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಕಳುಹಿಸಲಾಗಿದ್ದು, ಪಿಎಸಿ ಕಮಾಂಡೆಂಟ್‌ಗಳಿಗೂ ಇದು ಅನ್ವಯಿಸುತ್ತದೆ. ಮಾರ್ಚ್ 31ಕ್ಕೆ ಇರುವ ಆಸ್ತಿಗಳ ವಿವರಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ಪ್ರತಿ ಅಧಿಕಾರಿ ತನ್ನ ಹೆಸರು, ಶ್ರೇಣಿ, ಬ್ಯಾಚ್ ಹಾಗೂ ಹಾಲಿ ವೇತನವನ್ನು ಚರಾಸ್ತಿಗಳ ವಿವರ ಸಲ್ಲಿಸುವಾಗ ನಮೂದಿಸಬೇಕು. ತಮ್ಮ ಹಾಗೂ ಸಂಬಂಧಿಗಳ ಹೆಸರಿನಲ್ಲಿರುವ ವಿವರ ದಾಖಲಿಸಬೇಕು. ಇದರ ಖರೀದಿಯ ಮೂಲ ಬೆಲೆ ಹಾಗೂ ಪ್ರಸ್ತುತ ಬೆಲೆಯನ್ನೂ ನಮೂದಿಸುವುದು ಕಡ್ಡಾಯ. ಅಧಿಕಾರಿಗಳು ಆಭರಣ, ವಿಮಾ ಪಾಲಿಸಿ, ಷೇರು, ಭದ್ರತಾ ಪತ್ರ, ಡಿಬೆಂಚರ್, ಕಾರು, ಮೋಟರ್ ಸೈಕಲ್ ಅಥವಾ ಇತರ ವಾಹನಗಳ ವಿವರ ಸಲ್ಲಿಸಬೇಕಾಗುತ್ತದೆ. ಎಲೆಕ್ಟ್ರಾನಿಕ್ ಅಪ್ಲಿಕೇಶನ್‌ಗಳಾದ ರೆಫ್ರಿಜರೇಟರ್ ಹಾಗೂ ಟಿವಿ ವಿವರವನ್ನೂ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News