ಕೇರಳದಲ್ಲಿ ಮಲಯಾಳಂ ಭಾಷೆ ಕಡ್ಡಾಯ: ಗಡಿನಾಡ ಕನ್ನಡಿಗರಲ್ಲಿ ಆತಂಕ

Update: 2017-04-10 16:36 GMT

ಕಾಸರಗೋಡು, ಎ.10: ಸಚಿವಾಲಯ ಸೇರಿದಂತೆ ಕೇರಳದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಮಲಯಾಳಂ ಭಾಷೆಯನ್ನು ಮೇ 1ರಿಂದ ಕಡ್ಡಾಯಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ. ಇದರಿಂದ ಗಡಿನಾಡ ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾoತರ ಹಕ್ಕುಗಳಿಗೆ ಪೆಟ್ಟು ನೀಡಿದಂತಾಗಿದೆ.

ಎಲ್ಲಾ ಸರಕಾರಿ, ಸಾರ್ವಜನಿಕ ವಲಯ, ಸ್ಥಳೀಯಾಡಳಿತ  ಸಂಸ್ಥೆ, ಸಹಕಾರಿ ಸಂಸ್ಥೆಗಳು ಹೊರಡಿಸುವ ಆದೇಶ, ಸುತ್ತೋಲೆ ಹಾಗೂ ಇತರ ಪತ್ರ  ವ್ಯವಹಾರ ಮಲಯಾಳಂ ಭಾಷೆಯಲ್ಲಿಯೇ ಇರಬೇಕು ಎಂದು ಎಲ್ಲಾ ಇಲಾಖೆಗಳಿಗೆ ಈಗಾಗಲೇ ಸುತ್ತೋಲೆ ಕಳುಹಿಸಲಾಗಿದೆ. ಮಲಯಾಳಂ ಕಡ್ಡಾಯಗೊಳಿಸುವ ಅಧ್ಯಾದೇಶ ಜಾರಿಗೆ ರಾಜ್ಯ ಸಚಿವ ಸಂಪುಟ ಅಂಗೀಕಾರ ನೀಡಿದ್ದರೂ, ಇದಕ್ಕಾಗಿ ಮಾತ್ರ ಸೋಮವಾರ ಪ್ರತ್ಯೇಕ ಸಚಿವ ಸಂಪುಟ ಕರಡು ಅಧ್ಯಾದೇಶಕ್ಕೆ ಅಂಗೀಕಾರ ನೀಡಿದೆ. ಸಿಬಿಎಸ್‌ಇ-ಐಸಿಎಸ್‌ಇ ಪಠ್ಯಪದ್ಧತಿ ಸಹಿತ ಎಲ್ಲಾ ಶಾಲೆಗಳಲ್ಲಿ ಮಲಯಾಳಂ ಭಾಷಾಧ್ಯಯನ ವಿಷಯ ಕಡ್ಡಾಯವಾಗಿ ಅನ್ವಯವಾಗುತ್ತದೆ. ರಾಜ್ಯಪಾಲರು ಸಹಿ ಹಾಕುವುದರೊಂದಿಗೆ ಅಧ್ಯಾದೇಶಕ್ಕೆ ಅಂತಿಮ ಅಂಗೀಕಾರ ಲಭಿಸಲಿದೆ.

2017-18ನ ಸಾಲಿನ ಶೈಕ್ಷಣಿಕ ಅಧ್ಯಯನ ವರ್ಷದಿಂದ ಅಧ್ಯಾದೇಶ ಜಾರಿಗೊಳಿಸಲು ಸರಕಾರ ತೀರ್ಮಾನಿಸಿದ್ದು, ಮಲಯಾಳಂ ಭಾಷೆ ಕಲಿಸದ ಶಾಲೆಗಳ ಮಾನ್ಯತೆ ರದ್ದುಗೊಳಿಸುವಂತಹ ಕಠಿಣ ಕ್ರಮಗಳು ಈ ಅಧ್ಯಾದೇಶದಲ್ಲಿದೆ. ಈ ಹೊಸ ನೀತಿಯಿಂದ ಕನ್ನಡ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಲಿದೆ. ಪ್ರತೀ ವರ್ಷ ಅಧ್ಯಾಪಕರ ಹುದ್ದೆ ಕಡಿತವಾಗಲಿದೆ. ಕನ್ನಡ ವಿದ್ಯಾರ್ಥಿಗಳ ಕೊರತೆಯಿಂದ ಅಧ್ಯಾಪಕರ ಹುದ್ದೆ ಇಲ್ಲದಾಗುವುದು ಮಾತ್ರವಲ್ಲದೇ ಜಿಲ್ಲೆಯಲ್ಲಿ ಕನ್ನಡ ಭಾಷಿಕರಿಗಿರುವ ವಿವಿಧ ಇಲಾಖೆಗಳ ಹುದ್ದೆಗಳು, ಸವಲತ್ತುಗಳು ಕ್ರಮೇಣ ಇಲ್ಲದಾಗುತ್ತವೆ. ಬಳಿಕ ಅಂತಿಮವಾಗಿ ಎಲ್ಲವೂ ಮಲಯಾಳಮಯಗೊಳಿಸುವ ಹುನ್ನಾರ ನಡೆಯುತ್ತಿದೆ ಎನ್ನಲಾಗುತ್ತಿದೆ.

ಗಡಿನಾಡ ಕಾಸರಗೋಡಿನ ಕನ್ನಡಿಗರ ಹಕ್ಕುಗಳನ್ನುಕೇರಳ ಸರಕಾರ ಕಸಿಯಲು ಹೊರಟಿದ್ದು, ಭಿನ್ನಮತ ಮರೆತು ಕಾಸರಗೋಡಿನ ಕನ್ನಡ  ಸಂಘಟನೆಗಳು ಹೋರಾಟ ನಡೆಸಬೇಕಾಗಿದೆ. ಕನ್ನಡ ಹೋರಾಟಗಾರರಲ್ಲಿ ಕಂಡುಬರುತ್ತಿರುವ ನಿರ್ಲಕ್ಷ ಧೋರಣೆ ಮತ್ತು ರಾಜಕೀಯದಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಧಕ್ಕೆ ಬರತೊಡಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News