ಏಕಾಏಕಿ 760 ಕಾರ್ಮಿಕರನ್ನು ಕೈಬಿಟ್ಟ ಸುಜ್ಲಾನ್ ಕಂಪೆನಿಯ ವಿರುದ್ಧ ಕಾರ್ಮಿಕರ ಪ್ರತಿಭಟನೆ
ಪಡುಬಿದ್ರೆ, ಎ.10: ಇಲ್ಲಿ ಕಾರ್ಯಾಚರಿಸುತ್ತಿರುವ ಸುಜ್ಲಾನ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 760 ಕಾರ್ಮಿಕರನ್ನು ಮುನ್ಸೂಚನೆ ನೀಡದೆ, ಏಕಾಏಕಿ ವಜಾಗೊಳಿಸಿರುವುದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಸುಜ್ಲಾನ್ ಕಂಪೆನಿಯ ಗುತ್ತಿಗೆ ವಹಿಸಿರುವ ಯುನಿಟೆಕ್ ಮತ್ತು ಎಸ್‌ಎಸ್‌ಪಿಎಲ್‌ನ ಎಲ್ಲಾ ಕಾರ್ಮಿಕರು ಬೆಳಗ್ಗೆ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕಂಪೆನಿಯಲ್ಲಿ 760 ಮಂದಿ ಕಾರ್ಮಿಕರಿಗೆ ಹಾಜರಾತಿ ಪುಸ್ತಕ ನೀಡಲು ನಿರಾಕರಿಸಿ "ತಮ್ಮನ್ನು ಕೆಲಸದಿಂದ ವಜಾ ಮಾಡಲಾಗಿದೆ" ಎಂದು ಅಧಿಕಾರಿಗಳು ಹೇಳಿದರು. ಮುನ್ಸೂಚನೆ ನೀಡದೆ, ಕೆಲಸದಿಂದ ಏಕಾಏಕಿ ವಜಾಗೊಳಿಸಿರುವ ಕ್ರಮವನ್ನು ವಿರೋಧಿಸಿ ಅಸಮಾಧಾನಗೊಂಡ ಕಾರ್ಮಿಕರು ಕಂಪೆನಿಯ ಆವರಣದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಪ್ರತಿಭಟನೆ ನಡೆಸಿದರು.
ಸಂಜೆಯ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿದರು. ಈ ವೇಳೆ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಕಾರ್ಮಿಕರು ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಕಾಪು ಶಾಸಕ ವಿನಯಕುಮಾರ್ ಸೊರಕೆ ಅಧಿಕಾರಿಗಳೊಂದಿಗೆ, ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ವಜಾಗೊಳಿಸಲಾದ ಕಾರ್ಮಿಕರನ್ನು ನಾಳೆಯಿಂದ ಮರು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದ ಸೊರಕೆ, ಇಲ್ಲದಿದ್ದಲ್ಲಿ ನಾಳೆ ನಡೆಯುವ ಪ್ರತಿಭಟನೆಯಲ್ಲಿ ಕಾರ್ಮಿಕರೊಂದಿಗೆ ತಾನೂ ಭಾಗವಹಿಸುತ್ತೇನೆ ಎಂದರು.
ಈ ಸಂದರ್ಭ ಕಂಪೆನಿ ಅಧಿಕಾರಿಗಳಾದ ಅಶೋಕ್ ಶೆಟ್ಟಿ, ಫಿಲಿಪ್ ಆಂಟೋನಿ, ದಕ್ಷಿನಾ ಮೂರ್ತಿ, ಕಿಶೋರ್, ಸ್ಥಳೀಯರಾದ ನವೀನ್‌ಚಂದ್ರ ಜೆ.ಶೆಟ್ಟಿ, ವಿಶ್ವಾಸ್ ಅಮೀನ್ ಉಪಸ್ಥಿತರಿದ್ದರು.