ರೈಲ್ವೆ ಉದ್ಯೋಗಿಗಳ ವಸತಿಗೃಹಕ್ಕೆ ನುಗ್ಗಿ ಹಲ್ಲೆ ಪ್ರಕರಣ: ಭದ್ರತೆ ಒದಗಿಸಲು ಆಗ್ರಹಿಸಿ ಧರಣಿ
ಮಂಗಳೂರು, ಎ. 10: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಎದುರು ಇರುವ ರೈಲ್ವೆ ಉದ್ಯೋಗಿಗಳ ವಸತಿಗೃಹದಲ್ಲಿ ರವಿವಾರ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿ ನಗ-ನಗದು ದೋಚಿರುವ ಘಟನೆಯನ್ನು ಖಂಡಿಸಿ ರೈಲ್ವೆ ಉದ್ಯೋಗಿಗಳು ಸೋಮವಾರ ನಿಲ್ದಾಣದೊಳಗೆ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಇಲಾಖೆಯ ತಾಂತ್ರಿಕ ತಜ್ಞ ಆನಂದ, ಸೆಂಟ್ರಲ್ ರೈಲ್ವೆ ಸ್ಟೇಶನ್ ಎದುರುಗಡೆ ಇರುವ ರೈಲ್ವೆ ಕ್ವಾಟರ್ಸ್‌ಗೆ ಗಡಿಯನ್ನು ನಿಗದಿಪಡಿಸಿ ಕಾಂಪೌಂಡ್ ವಾಲ್ ಮಾಡಬೇಕು. ಕಾಂಪೌಂಡ್ ವಾಲ್‌ಗೆ ಗೇಟ್ ಹಾಕಿ, ಕ್ವಾಟರ್ಸ್‌ನ ಸುತ್ತ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಆಗ್ರಹಿಸಿದರು.
ರೈಲ್ವೆ ವಸತಿಗೃಹದಲ್ಲಿ ತಿಂಗಳಿಗೆ ಎರಡು ಬಾರಿಯಾದರೂ ಮೊಬೈಲ್, ನಗದು ಕಳ್ಳತನಗಳು ನಡೆಯುತ್ತಿವೆ. ಗಾಂಜಾ ಸೇವನೆ ಮಾಡಿದವರ ಹಾವಳಿ ಕೂಡ ಹೆಚ್ಚುತ್ತಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಪುರುಷರು 24 ಗಂಟೆಗಳ ಕಾಲ ರೈಲ್ವೆ ಕಾರ್ಯಕ್ಕೆ ಲಭ್ಯವಿರಬೇಕಾಗಿರುವುದರಿಂದ ರೈಲ್ವೆ ಕ್ವಾಟರ್ಸ್‌ನಲ್ಲಿ ಮಹಿಳೆಯರೇ ಹೆಚ್ಚಾಗಿ ಇರುತ್ತಾರೆ. ನಮ್ಮ ಹೆಂಡತಿ, ಮಕ್ಕಳಿಗೆ ರಕ್ಷಣೆ ಒದಗಿಸಬೇಕೆಂದು ಧರಣಿನಿರತರು ಆಗ್ರಹಿಸಿದರು.
ಎಂಜಿನಿಯರಿಂಗ್ ವಿಭಾಗದ ಜಯಚಂದ್ರ ಮಾತನಾಡಿ, ಕ್ವಾಟರ್ಸ್‌ಗೆ ಭದ್ರತೆ ಇಲ್ಲದೆ ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕ್ವಾಟರ್ಸ್ ಬಳಿಯಲ್ಲಿ ಅಪರಿಚಿತರ ಮತ್ತು ಗಾಂಜಾ ಸೇವನೆ ಮಾಡಿದವರ ಹಾವಳಿ ಹೆಚ್ಚಾಗುತ್ತಿವೆ. ನಾವು ಹೊರ ರಾಜ್ಯದವರು ಎಂಬ ಭಾವನೆಯಿಂದ ಹಲ್ಲೆ, ಕಳ್ಳತನದಂತಹ ಪ್ರಕರಣಗಳು ನಡೆಯುತ್ತಿವೆ. ಮೊದಲು ಕ್ವಾಟರ್ಸ್‌ಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಪೊರೇಟರ್ ವಿನಯ್‌ರಾಜ್ ಈ ಸಂದರ್ಭ ಉಪಸ್ಥಿತರಿದ್ದರು.