ಮೇ 15-17: 'ವಿಕಾಸ ಜೀವನ ಕಲೆ' ಕಾರ್ಯಾಗಾರ
ಮಂಗಳೂರು, ಎ.10: ಗೆಟ್‌ಸ್ಮಾರ್ಟ್ ಹಾಗೂ ಮೇರಿಹಿಲ್ ಏರ್‌ಪೋರ್ಟ್ ರಸ್ತೆಯಲ್ಲಿರುವ ವಿಕಾಸ್ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ 9ನೆ ತರಗತಿ ಪಾಸಾದ ವಿದ್ಯಾರ್ಥಿಗಳಿಗಾಗಿ ಕಾಲೇಜು ಆವರಣದಲ್ಲಿ ಮೇ 15ರಿಂದ 17ರವರೆಗೆ 'ವಿಕಾಸ ಜೀವನಕಲೆ ಕಾರ್ಯಾಗಾರ' ವಸತಿಯುಕ್ತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವಿಕಾಸ್ ಶಿಕ್ಷಣ ಸಂಸ್ಥೆಯ ಸಲಹೆಗಾರ ಡಾ.ಅನಂತ ಪ್ರಭು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಾಲೆಯಲ್ಲಿ ಕಂಡುಬರುವ ಸ್ಪರ್ಧಾತ್ಮಕತೆ ಮತ್ತು ತಾಂತ್ರಿಕತೆಯ ಒತ್ತಡವನ್ನು ನಿಭಾಯಿಸುವಲ್ಲಿ ಶಿಬಿರಾರ್ಥಿಗಳನ್ನು ಸಶಕ್ತಗೊಳಿಸುವುದು ಇದರ ಉದ್ದೇಶವಾಗಿದೆ ಎಂದವರು ಹೇಳಿದರು. ಈ ಶಿಬಿರವು ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ. ಪಾಲೇಮಾರ್, ಸಂಸ್ಥೆಯ ಪ್ರಾಂಶುಪಾಲ ಡಾ. ರಾಜಾರಾಂ ರಾವ್, ಡಾ. ಉಮೇಶ್ ಭೂಷಿ ಮತ್ತಿತರ ಗಣ್ಯರ ಸಲಹೆಯ ಮೇರೆಗೆ ಜರಗಲಿದೆ ಎಂದರು.
ವೇದಿಕ್ ಮ್ಯಾಥಮೆಟಿಕ್ಸ್ ಕುರಿತು ಆದರ್ಶ್ ಗೋಖಲೆ, ಮಾನಸಿಕ ಆರೋಗ್ಯ ನಿರ್ವಹಣೆ ಕುರಿತು ಮಂಜುಳಾ ರಾವ್ ಹಾಗೂ ಡಾ.ಸುಫಲಾ ಕೋಟ್ಯಾನ್, ಜೀವನಕಲೆ ಮತ್ತು ಮೃದುಕಲೆ ಕುರಿತು ಸುಧೀಂದ್ರ ಶಾಂತಿ, ಸಾರಿಗೆ ನಿಯಮ ಮತ್ತು ನಿಬಂಧನೆಗಳ ಕುರಿತು ಜೋ ಗೊನ್ಸಾಲ್ವಿಸ್, ಮೂಲ ಪ್ರಥಮ ಚಿಕಿತ್ಸೆ ಕುರಿತು ಡಾ.ಪ್ರಸನ್ನ, ಸ್ವರಕ್ಷಣೆ ಕುರಿತು ಕಾರ್ತಿಕ್ ಕಟೇಲ್, ಅಡುಗೆ ಕುರಿತು ಲೆಸ್ಟರ್ ಮಾರ್ತಾ, ಕ್ರಾಫ್ಟ್ ಆ್ಯಂಡ್ ಸ್ಕೋರ್ ಈವನ್ ಮೋರ್ ಕುರಿತು ಗೋಪಾಡ್ಕರ್ ಉಪನ್ಯಾಸ ನೀಡಲಿದ್ದಾರೆ ಎಂದವರು ಮಾಹಿತಿ ನೀಡಿದರು.
ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಮಾನ್ಯತಾ ಪತ್ರ ನೀಡಲಾಗುವುದು. ನೋಂದಣಿಯು ಮೇ 10ರವರೆಗೆ ನಡೆಯಲಿದೆ. ನೋಂದಣಿ ಶುಲ್ಕ, ಉಪಾಹಾರ, ಭೋಜನ, ಸ್ನಾಕ್ಸ್ ಹಾಗೂ ರಾತ್ರಿ ಭೋಜನದೊಂದಿಗೆ ಇಬ್ಬರು ನಿಲ್ಲುವಂತಹ ಕೊಠಡಿಗೆ 750 ರೂ. ಶುಲ್ಕ ನಿಗದಿ ಮಾಡಲಾಗಿದೆ. ಶಿಬಿರದಲ್ಲಿ ಹುಡುಗರು ಹಾಗೂ ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿವೆ. ಆಸಕ್ತರು ತಮ್ಮ ಹೆಸರನ್ನು ವಿಕಾಸ್ ಪ್ರಿ ಯುನಿವರ್ಸಿಟಿ ಕಾಲೇಜು, ಮೇರಿಹಿಲ್, ಏರ್‌ಪೋರ್ಟ್ ರಸ್ತೆ, ಮಂಗಳುರು ಇಲ್ಲಿ ನೋಂದಾಯಿಸಬಹುದು. puc@vikascollege.com ಅಥವಾ www.vikascollege.com ನ್ನು ಸಂಪರ್ಕಿಸಬಹುದು ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ರಾಜಾರಾಂ ರಾವ್, ವಿಕಾಸ್ ಪಿಯು ಕಾಲೇಜಿನ ನಿರ್ದೇಶಕಿ ಮಂಜುಳಾ, ಪಾರ್ಥ ಸಾರಥಿ ಉಪಸ್ಥಿತರಿದ್ದರು.