×
Ad

ಮಣಿಪಾಲ ವೈದ್ಯರಿಂದ ಹೊಸ ವಂಶವಾಹಿ ರೋಗಗಳ ಪತ್ತೆ

Update: 2017-04-11 00:01 IST

ಉಡುಪಿ, ಎ.10: ಮಣಿಪಾಲ ಕೆಎಂಸಿಯ ಮೆಡಿಕಲ್ ಜೆನೆಟಿಕ್ಸ್ ವಿಭಾಗದ ಡಾ.ಗಿರೀಶ್ ಕಟ್ಟಿ ಅವರ ನೇತೃತ್ವದಲ್ಲಿ ‘ಮಲ್ಟಿಪಲ್ ಮೆಟೋಕಾಂಡ್ರಿಯಲ್ ಡಿಸ್ಫಂಕ್ಷನ್ ಸಿಂಡ್ರೋಮ್’ ಎಂದು ಕರೆಯಲಾಗುವ ಹೊಸ ವಂಶವಾಹಿ ಕಾಯಿಲೆಯನ್ನು ಪತೆ್ತ ಮಾಡಲಾಗಿದೆ.

ಈ ಪ್ರದೇಶದ ಪರಸ್ಪರ ಸಂಬಂಧ ಹೊಂದಿರದ ಎರಡು ಕುಟುಂಬಗಳ ನಾಲ್ವರು ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇವರಲ್ಲಿ ಈ ಕಾಯಿಲೆಗೆ ಕಾರಣವಾಗಿರಬಹುದಾದ ಐಎಸ್‌ಎಐ ಜೀನ್‌ಗಳ ನ್ಯೂನತೆಯನ್ನು ಪತ್ತೆ ಮಾಡಿರುವುದಾಗಿ ಡಾ.ಗಿರೀಶ್ ಕಟ್ಟಿ ತಿಳಿಸಿದ್ದಾರೆ.

ತಂಡದಲ್ಲಿದ್ದ ಕ್ಲಿನಿಕಲ್ ಜೆನೆಟಿಕ್ಸ್ ತಜ್ಞೆ ಡಾ.ಅಂಜು ಶುಕ್ಲಾ ಈ ಎರಡು ಕುಟುಂಬಗಳ ಮಕ್ಕಳಲ್ಲಿ ಗಂಭೀರ ನರ ಸಂಬಂಧಿ ಕಾಯಿಲೆಗಳ ಅಧ್ಯಯನ ನಡೆಸಿದ್ದರು. ಕಾಯಿಲೆಯಿಂದ ಬಾಧಿತವಾಗಿದ್ದ ಈ ನಾಲ್ಕೂ ಮಕ್ಕಳು ಎಳವೆಯಲ್ಲೇ ಮರಣ ಹೊಂದಿದ್ದರು. ಎಲ್ಲ ಜೀನ್‌ಗಳನ್ನು ಒಂದು ಪ್ರಯೋಗಕ್ಕೆ ಒಳಪಡಿಸುವುದಕ್ಕಾಗಿ ಮೊದಲನೆ ಕುಟುಂಬದ ಡಿಎನ್‌ಎಯನ್ನು ಎಕ್ಸೋಮ್ ಸೀಕ್ವೆನ್ಸಿಂಗ್ ಎಂದು ಕರೆಯಲಾಗುವ ಹೊಸ ತಂತ್ರಜ್ಞಾನದ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು ಎಂದರು.

ಆನಂತರ ಜೈವಿಕ ಮಾಹಿತಿಗಳ ವಿಶ್ಲೇಷ ಣೆಯ ಮೂಲಕ ಸಮಾನ ರೀತಿಯ ಬಾಧಿತ ಕುಟುಂಬವನ್ನು ಗುರುತಿಸಲಾಯಿತು. ಎಲ್ಲ ನಾಲ್ಕು ಮಕ್ಕಳಲ್ಲೂ ಮೆದುಳಿನ ಬೂದು ಅಂಶದ (ವೈಟ್ ಮ್ಯಾಟರ್ ಡಿಸೀಸ್ ಆಫ್ ಬ್ರೈನ್) ತೀವ್ರ ಕಾಯಿಲೆ ಹಾಗೂ ಜೀವಕೋಶಗಳಲ್ಲಿ ಮೈಟೋಕಾಂಡ್ರಿಯಾದ ಕಾರ್ಯವೈಫಲ್ಯ ಪತ್ತೆಯಾಯಿತು ಎಂದವರು ತಿಳಿಸಿದರು.

ಮಣಿಪಾಲ ವಿವಿಯ ಉಪಕುಲಪತಿ ಡಾ.ವಿನೋದ್ ಭಟ್, ಕಾಯಿಲೆಗೆ ಕಾರಣವಾಗಿರುವ ಜೆನೆಟಿಕ್ ಮೂಲದ ಸಂಶೋಧನೆಗಾಗಿ ಕೆಎಂಸಿಯ ಮೆಡಿಕಲ್ ಜೆನೆಟಿಕ್ಸ್ ವಿಭಾಗದ ತಂಡವನ್ನು ಶ್ಲಾಘಿಸಿದರು. ನೇಚರ್ ಪಬ್ಲಿಷಿಂಗ್ ಗ್ರೂಪ್ ಪ್ರಕಟಿಸುವ ಹ್ಯೂಮನ್ ಜೆನೆಟಿಕ್ಸ್ ಕುರಿತಾದ ಜನಪ್ರಿಯ ಪತ್ರಿಕೆಯಲ್ಲಿ ಈ ಸಂಶೋಧನೆಗೆ ಸಂಬಂಧಿಸಿದ ವಿವರಗಳು ಪ್ರಕಟಗೊಂಡಿದೆ ಎಂದರು.

ಹೊಸ ಜೀನ್‌ನ ಸಂಶೋಧನೆಯಲ್ಲಿ ತಮ್ಮ ತಂಡ ತೋರಿದ ಸಾಧನೆ ಮತ್ತು ಪ್ರಯತ್ನವನ್ನು, ಮೂಳೆಗಳ ಜೆನೆಟಿಕ್ ಅಸ್ವಸ್ಥತೆಮತ್ತು ಮಕ್ಕಳಲ್ಲಿ ಮೆದುಳಿನ ಅಸ್ವಸ್ಥತೆಗೆ ಸಂಬಂಧಿಸಿದ ಹಾಗೆ ವಿಭಾಗ ಮಾಡಿದ ಮಹತ್ವದ ಕೆಲಸದ ವಿವರಗಳನ್ನು ಡಾ.ಗಿರೀಶ್ ಕಟ್ಟಿ ನೀಡಿದರು.

ಕೆಎಂಸಿಯ ಡೀನ್ ಡಾ.ಪೂರ್ಣಿಮಾ ಬಾಳಿಗಾ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಕರ್ನಲ್ ಎಂ.ದಯಾನಂದ ತಂಡಕ್ಕೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News