ಶೂಟೌಟ್‌ನಲ್ಲಿ ಚಿಲಿ ಔಟ್;ಭಾರತ ಸೆಮಿಫೈನಲ್‌ಗೆ
ವೆಸ್ಟ್‌ವ್ಯಾಂಕೊವರ್(ಕೆನಡಾ), ಎ.10: ಭಾರತದ ವನಿತೆಯರ ಹಾಕಿ ತಂಡ ಇಲ್ಲಿ ನಡೆದ ಮಹಿಳೆಯರ ಹಾಕಿ ವರ್ಲ್ಡ್ ಲೀಗ್ ರೌಂಡ್ -2ಫೈನಲ್‌ನಲ್ಲಿ ಚಿಲಿ ತಂಡವನ್ನು ಪೆನಾಲ್ಟಿ ಶೂಟ್‌ನಲ್ಲಿ 3-1ಅಂತರದಲ್ಲಿ ಮಣಿಸಿ ವರ್ಲ್ಡ್ ಲೀಗ್ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಆಟದ ನಿಗದಿತ ಸಮಯ ಕೊನೆಗೊಂಡಾಗ ಭಾರತ ಮತ್ತು ಚಿಲಿ ತಂಡಗಳು ತಲಾ 1-1 ಗೋಲುಗಳಿಂದ ಸಮಬಲ ಸಾಧಿಸಿತ್ತು. ಫಲಿತಾಂಶ ನಿರ್ಣಯಿಸಲು ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಚಿಲಿಗೆ ಸೋಲುಣಿಸಿತು.
ಭಾರತದ ಗೋಲು ಕೀಪರ್ ಸವಿತಾ ಪೂನಿಯಾ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಗೋಲು ಕೀಪರ್ ಆಫ್ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾದರು.
ಸವಿತಾ ಅವರು ಚಿಲಿ ತಂಡದ ಕಿಮ್ ಜಾಕೋಬ್ ಮತ್ತು ಜೊಸೆಫಾ ವಿಲ್ಲಾಲಾಬೆಟಿಯ ಅವರಿಗೆ ಗೋಲು ನಿರಾಕರಿಸಿ ಭಾರತದ ಗೆಲುವಿಗೆ ನೆರವಾದರು.
ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಪರ ನಾಯಕಿ ರಾಣಿ ರಾಂಪಾಲ್ ಮತ್ತು ಮೊನಿಕಾ ಚೆಂಡನ್ನು ಎದುರಾಳಿ ತಂಡದ ಗೋಲು ಪೆಟ್ಟಿಗೆಗೆ ಸೇರಿಸಿ ಭಾರತಕ್ಕೆ 2-0 ಮುನ್ನಡೆ ಸಾಧಿಸಲು ನೆರವಾದರು.
ಇದಕ್ಕೂ ಮೊದಲು ಚಿಲಿ ತಂಡದ ಕರೋಲಿನಾ ಗಾರ್ಸಿಯ ಮೂರನೆ ಯತ್ನದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಬಾರಿಸುವಲ್ಲಿ ಯಶಸ್ವಿಯಾದರು. ಆದರೆ ದೀಪಿಕಾ ಎದುರಾಳಿ ತಂಡದ ಗೋಲು ಪೆಟ್ಟಿಗೆಗೆ ಚೆಂಡನ್ನು ತಲುಪಿಸುವುದರೊಂದಿಗೆ ಭಾರತ ಹಾಕಿ ವರ್ಲ್ಡ್ ಲೀಗ್ ರೌಂಡ್ -2ಪ್ರಶಸ್ತಿಯನ್ನು ತನ್ನದಾಗಿಸಿತು.
ಫೈನಲ್ ಪಂದ್ಯದಲ್ಲಿ ಭಾರತದ ಆರಂಭ ಚೆನ್ನಾಗಿರಲಿಲ್ಲ. 5ನೆ ನಿಮಿಷದಲ್ಲಿ ಚಿಲಿಯ ಮಲ್ಡೊನಾಡೊ ಗೋಲು ಬಾರಿಸಿ ಚಿಲಿಗೆ 1-0 ಮುನ್ನಡೆಗೆ ನೆರವಾದರು. ಭಾರತ ಹಿನ್ನಡೆ ಅನುಭವಿಸಿದ್ದರೂ, ಒತ್ತಡಕ್ಕೆ ಸಿಲುಕಲಿಲ್ಲ. ಗೋಲು ಕೀಪರ್ ಸವಿತಾ ಎದುರಾಳಿ ತಂಡ ಗೋಲು ಖಾತೆ ತೆರೆಯುವುದನ್ನು ತಡೆಯಲು ವಿಫಲರಾಗಿದ್ದರೂ, ಬಳಿಕ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಭಾರತಕ್ಕೆ ಸಮಬಲ ಸಾಧಿಸಲು ಕೆಲವು ಅವಕಾಶಗಳು ಒದಗಿಬಂದರೂ 41ನಿಮಿಷಗಳ ತನಕ ಕಾಯಬೇಕಾಯಿತು.
22ನೆ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಅವಕಾಶದಲ್ಲಿ ಭಾರತಕ್ಕೆ ಗೋಲು ಬರಲಿಲ್ಲ. ಚಿಲಿ ತಂಡದ ಗೋಲು ಕೀಪರ್ ಭಾರತಕ್ಕೆ ಗೋಲು ನಿರಾಕರಿಸಿದರು.
41ನೆ ನಿಮಿಷದಲ್ಲಿ ಅನುಪಾ ಬಾರ್ಲ ಪೆನಾಲ್ಟಿ ಕಾರ್ನರ್‌ನಲ್ಲಿ ಬಾರಿಸಿದ ಚೆಂಡು ಚಿಲಿ ತಂಡದ ಗೋಲು ಪೆಟ್ಟಿಗೆಗೆ ಸೇರಿತು. ಇದರೊಂದಿಗೆ ಭಾರತ 1-1 ಸಮಬಲ ಸಾಧಿಸಿತು. ಬಳಿಕ ಉಭಯ ತಂಡಗಳಿಂದಲೂ ಗೋಲು ಬರಲಿಲ್ಲ. ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ ಚಿಲಿಯನ್ನು ಹೊರದಬ್ಬಿತು.
,,,,,,,,,,
‘‘ ಚಿಲಿ ಬಲಿಷ್ಠ ತಂಡವಾಗಿದೆ. ಆಟ ಆರಂಭದಲ್ಲೇ ಗೋಲು ದಾಖಲಿಸಿ ಮುನ್ನಡೆ ಸಾಧಿಸಿತ್ತು. ಸಮಬಲ ಸಾಧಿಸಲು ಭಾರತ ಬಹಳ ಹೊತ್ತು ಕಾಯಬೇಕಾಯಿತು. ಕೆಲವು ದಿನಗಳ ಹಿಂದೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಆಟದ ವಾತಾವರಣ ಚೆನ್ನಾಗಿರಲಿಲ್ಲ. ನಮಗೆ ಟೂರ್ನಮೆಂಟ್‌ನಲ್ಲಿ ಆಡುವುದು ಸವಾಲಾಗಿ ಪರಿಣಮಿತ್ತು. ಆದರೆ ನಾವು ವರ್ಲ್ಡ್ ಲೀಗ್ ಸೆಮಿಫೈನಲ್ ತಲುಪುವ ಗುರಿಯೊಂದಿಗೆ ಆಡಿದ್ದೇವು. ನಮ್ಮ ಪ್ರಯತ್ನ ಫಲ ನೀಡಿದೆ’’
-ರಾಣಿ ರಾಂಪಾಲ್ , ಭಾರತದ ಮಹಿಳಾ ಹಾಕಿ ತಂಡದ ನಾಯಕಿ.
,,,,,,,,,,,