×
Ad

ಅಧಿಕ ಬುಕ್ಕಿಂಗ್ ನೆಪ: ಪ್ರಯಾಣಿಕನನ್ನು ವಿಮಾನದಿಂದ ಹೊರಗೆಳೆದ ಸಿಬ್ಬಂದಿ

Update: 2017-04-11 09:06 IST

ಚಿಕಾಗೊ, ಎ.11: ಅಧಿಕ ಬುಕ್ಕಿಂಗ್ ಆಗಿದೆ ಎಂಬ ಕಾರಣ ನೀಡಿ, ವಿಮಾನಯಾನಿಯೊಬ್ಬರನ್ನು ಬಲಾತ್ಕಾರವಾಗಿ ವಿಮಾನದಿಂದ ಹೊರಕ್ಕೆಳೆದು ಹಾಕಿದ ಅಮಾನವೀಯ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಯುನೈಟೆಡ್ ಏರ್‌ಲೈನ್ಸ್‌ನ ಈ ಕ್ರಮ ಇದೀಗ ವಿಶ್ವಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಆದರೆ ಪ್ರಯಾಣಿಕನಿಗೆ ವಿಮಾನದಿಂದ ಹೊರಹೋಗುವಂತೆ ಮನವಿ ಮಾಡಿದ್ದಾಗಿ ಏರ್‌ಲೈನ್ಸ್‌ ಹೇಳಿಕೊಂಡಿದೆ. ಚಿಕಾಗೋದಿಂದ ಕೆಂಟಕಿಯ ಲೂಸ್‌ವಿಲ್ಲೆಗೆ ಹೋಗುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಆಗ ಉಂಟಾದ ವಾಗ್ವಾದ ಹಾಗೂ ಅಹಿತಕರ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು.

ಚಿಕಾಗೊ ಪೊಲೀಸರು ವಿಮಾನದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರನ್ನು ಸಮಾಧಾನಿಸಲು ಹರಸಾಹಸ ಮಾಡುತ್ತಿರುವ ಸ್ಮಾರ್ಟ್‌ಫೋನ್ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀರಾಡುತ್ತಿದ್ದ ಆ ವ್ಯಕ್ತಿಯನ್ನು ವಿಮಾನದಿಂದ ಹೊರಕ್ಕೆ ಎಳೆದೊಯ್ಯುತ್ತಿದ್ದರೆ ಇತರ ವಿಮಾನಯಾನಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು.
ಮತ್ತೊಬ್ಬ ವ್ಯಕ್ತಿ, "ಓ ಮೈ ಗಾಡ್, ಆ ವ್ಯಕ್ತಿಗೆ ಏನು ಮಾಡಿದ್ದೀರಿ ನೋಡಿ" ಎಂದು ಉದ್ಗರಿಸುತ್ತಿರುವುದೂ ವೀಡಿಯೊದಲ್ಲಿ ದಾಖಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಇಬ್ಬರು ಹದಿಹರೆಯದ ಯುವತಿಯರು ಲೆಗ್ಗಿನ್ಸ್ ಧರಿಸಿದ್ದಾರೆ ಎಂಬ ಕಾರಣಕ್ಕೆ ವಿಮಾನ ಏರಲು ಅವಕಾಶ ನೀಡದೇ ಇದೇ ವಿಮಾನಯಾನ ಸಂಸ್ಥೆ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿತ್ತು. ವಿಮಾನಯಾನಿಗಳು ಡ್ರೆಸ್‌ಕೋಡ್ ಅನುಸರಿಸುವುದು ಕಡ್ಡಾಯ ಎಂದು ತನ್ನ ಕ್ರಮವನ್ನು ಸಂಸ್ಥೆ ಸಮರ್ಥಿಸಿಕೊಂಡಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News