×
Ad

ಕ್ಯಾಲಿಫೋರ್ನಿಯಾದ ಶಾಲೆಯೊಂದರಲ್ಲಿ ಶೂಟೌಟ್: ವಿದ್ಯಾರ್ಥಿ ಸಹಿತ ಮೂವರು ಸಾವು

Update: 2017-04-11 10:25 IST

ಕ್ಯಾಲಿಫೋರ್ನಿಯಾ, ಎ.11: ಕ್ಯಾಲಿಫೋರ್ನಿಯದ ಸ್ಯಾನ್‌ಬರ್ಡಿನೊದಲ್ಲಿರುವ ಪ್ರಾಥಮಿಕ ಶಾಲೆಯೊಂದರಲ್ಲಿ ಶೂಟೌಟ್ ಘಟನೆ ನಡೆದಿದ್ದು, ಘಟನೆಯಲ್ಲಿ ಶಿಕ್ಷಕಿ ಹಾಗೂ ಎಂಟು ವರ್ಷದ ವಿದ್ಯಾರ್ಥಿ ಸೇರಿದಂತೆ ಮೂವರು ಮೃತ ಪಟ್ಟಿರುವುದಾಗಿ ವರದಿಯಾಗಿದೆ.

  ದಾಳಿ ನಡೆಸಿದ ದುಷ್ಕರ್ಮಿ ಶಿಕ್ಷಕಿಯ ಮಾಜಿ ಪತಿಯಾಗಿದ್ದು, ಒಂದು ತಿಂಗಳ ಹಿಂದೆಯಷ್ಟೇ ತನ್ನ ಪತ್ನಿಯನ್ನು ತೊರೆದಿದ್ದ ಎನ್ನಲಾಗಿದೆ. ದುಶ್ಚಟಗಳ ದಾಸನಾಗಿದ್ದ ದುಷ್ಕರ್ಮಿ ಈಹಿಂದೆ ಹಲವು ಬಾರಿ ಕೌಟುಂಬಿಕ ಕಲಹ ಹಾಗೂ ಪತ್ನಿಯನ್ನು ಥಳಿಸಿ ಗೃಹ ಹಿಂಸಾಚಾರದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಒಂದು ತಿಂಗಳ ಹಿಂದೆ ಪತ್ನಿ ತನ್ನನ್ನು ತೊರೆದಿದ್ದ ಆಕ್ರೋಶದಲ್ಲಿ ಶಾಲೆಯ ತರಗತಿಯೊಳಗೆ ನುಗ್ಗಿದ್ದ ದುಷ್ಕರ್ಮಿ ತನ್ನ ಮಾಜಿ ಪತ್ನಿ, ಶಾಲೆಯ ವಿಶೇಷ ಶಿಕ್ಷಣ ಶಿಕ್ಷಕಿ 53ರ ಹರೆಯದ ಎಲೈನ್ ಸ್ಮಿತ್‌ರನ್ನು ಗುರಿಯಾಗಿಸಿ ರಿವಾಲ್ವರ್‌ನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ. ಪರಿಣಾಮ ಪತ್ನಿ ಹಾಗೂ ಇತರ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇತರ ಮೂವರಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ಸೆಡ್ರಿಕ್ ಆ್ಯಂಡರ್ಸನ್ ಎಂದು ಗುರುತಿಸಲಾಗಿದ್ದು, ಈತ ಹತ್ಯೆ ನಡೆಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುಷ್ಕರ್ಮಿ ಕ್ಲಾಸ್‌ರೂಮ್‌ನೊಳಗೆ ದಾಳಿ ನಡೆಸಿದ್ದ ಸಂದರ್ಭದಲ್ಲಿ 15 ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರು. ಗಂಭೀರ ಗಾಯಗೊಂಡಿದ್ದ 8ರ ಹರೆಯದ ಜೋನಾಥನ್ ಮಾರ್ಟಿನೆಝ್‌ರನ್ನು ಆಸ್ಪತ್ರೆಗೆ ಸೇರಿಸಿದರೂ ಫಲಕಾರಿಯಾಗಲಿಲ್ಲ. ಹೆಸರು ಬಹಿರಂಗವಾಗದ 9ರ ಹರೆಯದ ಇನ್ನೊಬ್ಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯಲ್ಲಿ ಶೂಟೌಟ್ ನಡೆದ ಘಟನೆಯ ಸುದ್ದಿ ತಿಳಿದ ಶಾಲಾ ಮಕ್ಕಳ ಹೆತ್ತವರು ಹಾಗೂ ಪಾಲಕರು ಶಾಲೆಯ ಬಳಿ ಜಮಾಯಿಸಿ ತಮ್ಮ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಶಾಲೆಯಲ್ಲಿರುವ ಇತರ 600 ವಿದ್ಯಾರ್ಥಿಗಳನ್ನು ಬಸ್‌ನ ಮೂಲಕ ಕ್ಯಾಲಿಫೋರ್ನಿಯಾ ಸ್ಟೇಟ್ ಯುನಿವರ್ಸಿಟಿ ಸ್ಯಾನ್‌ಬರ್ಡಿನೊ ಕ್ಯಾಂಪಸ್‌ಗೆ ಕರೆದೊಯ್ಯಲಾಗಿದೆ.

2015ರ ಡಿಸೆಂಬರ್‌ನಲ್ಲಿ ಇದೇ ನಗರದಲ್ಲಿ ನಡೆದ ಉಗ್ರಗಾಮಿಗಳ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿದ್ದರು. ಆ ಘಟನೆಯಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News