ನಾನು ತಪ್ಪು ಮಾತಾಡಿದೆ , ಅದಕ್ಕಾಗಿ ವಿಷಾದಿಸುತ್ತೇನೆ : ತರುಣ್ ವಿಜಯ್

Update: 2017-04-11 11:20 GMT

ಭಾರತೀಯರು ಕಪ್ಪು ಮೈಬಣ್ಣದ ದಕ್ಷಿಣ ಭಾರತೀಯರೊಂದಿಗೆ ಬಾಳುತ್ತಿರುವುದರಿಂದ ಭಾರತೀಯರು ಜನಾಂಗೀಯ ದ್ವೇಷಿಗಳಾಗಿರಲು ಸಾಧ್ಯವಿಲ್ಲ ಎಂಬ ತನ್ನ ವಿವಾದಾತ್ಮಕ ಹೇಳಿಕೆಗಾಗಿ ಬಿಜೆಪಿಯ ಮಾಜಿ ಸಂಸದ ಹಾಗೂ ಆರೆಸ್ಸೆಸ್ ಮುಖವಾಣಿ ‘ಪಾಂಚಜನ್ಯ ’ದ ಸಂಪಾದಕ ತರುಣ್ ವಿಜಯ್ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಆಂಗ್ಲ ದೈನಿಕವೊಂದಕ್ಕೆ ಅವರು ನೀಡಿರುವ ಸಂದರ್ಶನದ ತುಣುಕುಗಳು ಇಲ್ಲಿವೆ.....ಓದಿಕೊಳ್ಳಿ.

ಅಲ್-ಜಝೀರಾ ವಾಹಿನಿಯಲ್ಲಿ ಭಾರತೀಯರು ಜನಾಂಗೀಯ ದ್ವೇಷಿಗಳಾಗಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡುವ ಮುನ್ನ ಆ ಬಗ್ಗೆ ಚೆನ್ನಾಗಿ ಯೋಚಿಸಿದ್ದೀರಾ?

ಭಾರತ ಮತ್ತು ಭಾರತೀಯರು ಜನಾಂಗೀಯ ದ್ವೇಷಿಗಳಾಗಿದ್ದಾರೆ ಎಂಬ ಅರೋಪಗಳ ಸರಮಾಲೆಯನ್ನು ನಾನು ಒಂಟಿಯಾಗಿ ಎದುರಿಸುತ್ತಿದ್ದೆ. ಆಫ್ರಿಕನ್ ಸ್ನೇಹಿತರನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ, ತಾವು ಸುರಕ್ಷಿತರು ಎಂದು ಅವರು ಭಾವಿಸಬೇಕು ಮತ್ತು ತಕ್ಷಣದ ಕ್ರಮ ಅಗತ್ಯವಾಗಿದೆ ಎಂದು ನಾನು ದೃಢವಾಗಿ ಹೇಳಿದ್ದೆ. ನಾನು ಅವರ ನೋವಿನಲ್ಲಿ ಭಾಗಿಯಾಗಿದ್ದೇನೆ,ಆದರೆ ಇಂತಹ ಘಟನೆಗಳು ವಿಕೃತ ಮನಸ್ಸುಗಳ ವರ್ತನೆಯಾಗಿವೆ. ಭಾರತದಲ್ಲಿಯೂ ನಾವು ಜಾತಿ, ವರ್ಗ, ಧರ್ಮ, ಭಾಷೆ ಮತ್ತು ಸಮುದಾಯಗಳ ನೆಲೆಯಲಲಿ ತುಂಬ ತಾರತಮ್ಯವನ್ನು ಅನುಭವಿಸುತ್ತಿದ್ದೇವೆ. ಆದರೆ ಮಾನವರಾಗಿ ನಾವೆಲ್ಲ ಜನಾಂಗೀಯ ದ್ವೇಷಿಗಳು ಎಂದು ಹೇಳುವುದು ತಪ್ಪಾಗುತ್ತದೆ. ಇದು ನಾನು ಎತ್ತಿದ್ದ ಮೂಲ ಅಂಶವಾಗಿತ್ತು. ಗಾಂಧಿ, ಮಂಡೇಲಾ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರ ದಾರಿಯನ್ನು ನಾವು ಅನುಸರಿಸಬೇಕಿದೆ.

ದಕ್ಷಿಣ ಭಾರತದ ರಾಜ್ಯಗಳ ಜನರೊಂದಿಗೆ ಬಾಳುತ್ತಿರುವ ಈ ‘ನಾವು ’ಎಂದರೆ ಯಾರು ಎನ್ನುವುದನ್ನು ವಿವರಿಸುತ್ತೀರಾ ?

 ‘ನಾವು’ ನಮ್ಮೆಲ್ಲರನ್ನೂ ಒಳಗೊಂಡಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ತವಾಂಗ್‌ನಿಂದ ಓಖಾವರೆಗಿನ ಎಲ್ಲ ಜನರು ಎನ್ನುವುದು ಅದರ ಅರ್ಥವಾಗಿದೆ. ಆಫ್ರಿಕನ್‌ರ ಪಾಲಿಗೆ ಭಾರತವು ಕೆಟ್ಟ ದೇಶ ಎಂದು ಸಾಬೀತುಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನಿಗೆ ನಾನು ಉತ್ತರಿಸುತ್ತಿದ್ದೆ. ನಿನ್ನ ತಾಯ್ನೆಡಿನ ಮಾನ ಕಳೆಯಬೇಡ, ತಮಿಳುನಾಡಿನಿಂದ ಕೇರಳ, ಕರ್ನಾಟಕ ಮತ್ತು ಆಂಧ್ರದವರೆಗಿನ ನಾವೆಲ್ಲರೂ ಒಂದಾಗಿ ಬಾಳುತ್ತಿದ್ದೇವೆ ಎನ್ನುವುದು ಆತನಿಗೆ ನನ್ನ ಉತ್ತರವಾಗಿತ್ತು. ದುರದೃಷ್ಟವಶಾತ್ ನಾನು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೆನೋ ಅದನ್ನು ತಿಳಿಸಲು ಸೂಕ್ತ ಶಬ್ದಗಳು ಆಗ ನನಗೆ ತೋಚಿರಲಿಲ್ಲ. ಹೀಗಾಗಿ ಅದು ವಿರುದ್ಧ ಅರ್ಥದಲ್ಲಿ ಕೊನೆಗೊಂಡಿದೆ. ಅದು ನನ್ನಿಂದಾಗಿದ್ದ, ಸಮರ್ಥಿಸಿಕೊಳ್ಳಲಾಗದ ತಪ್ಪು ಆಗಿತ್ತು.

ಈ ಬಗ್ಗೆ ಯಾವುದೇ ವಾದವಿಲ್ಲ. ತಕ್ಷಣವೇ ನಾನು ಟ್ವಿಟರ್‌ನಲ್ಲಿ ಕ್ಷಮೆ ಯಾಚಿಸಿದ್ದೇನೆ.

ನಿಮ್ಮ ಅಭಿಪ್ರಾಯದಲ್ಲಿ ತಮಿಳುನಾಡು,ಕೇರಳ,ಕರ್ನಾಟಕ ಮತ್ತು ಆಂಧ್ರದಲ್ಲಿ ‘ಕಪ್ಪು ’ಜನರೆಂದರೆ ಯಾರು?

 ಯಾರೂ ಅಲ್ಲ...ಖಂಡಿತವಾಗಿಯೂ ಯಾರೂ ಅಲ್ಲ. ನೀವು ವೀಡಿಯೊದಲ್ಲಿ ಗಮನಿಸಿರಬಹುದು. ‘ಕಪ್ಪು ’ಎಂಬ ಶಬ್ದ ತಮಿಳುನಾಡು ಅಥವಾ ಇತರ ಯಾವುದೇ ರಾಜ್ಯವನ್ನು ಉಲ್ಲೇಖಿಸಿ ಬಳಕೆಯಾಗಿರಲಿಲ್ಲ. ಅದು ನಾವು ಹಿಂದಿಯಲ್ಲಿ ಹೇಳುವಂತೆ....ಎಲ್ಲ ಬಣ್ಣಗಳ ಜನರು ನಮ್ಮ ಸುತ್ತಲಿದ್ದಾರೆ ಮತ್ತು ನಾವೆಲ್ಲ ಒಂದಾಗಿ ಬಾಳುತ್ತಿದ್ದೇವೆ ಎಂಬ ಹೇಳಿಕೆಯಂತಿತ್ತು. ನಾನು ತಪ್ಪಾಗಿ ಮಾತನಾಡಿದ್ದೆ ಮತ್ತು ಅದಕ್ಕಾಗಿ ನನಗೆ ತುಂಬ ವಿಷಾದವಿದೆ.

ದಕ್ಷಿಣ ಭಾರತೀಯರ ವಿಷಯಗಳಲ್ಲಿ ನೀವು ವಿಶೇಷವಾದ ಆಸಕ್ತಿ ತೋರಿಸಿದ್ದೀರಿ. ನಿಮ್ಮ ಹೇಳಿಕೆಯು ನಿಮ್ಮ ವಿಶ್ವಾಸಾರ್ಹತೆಗೆ ಹಾನಿಯನ್ನುಂಟು ಮಾಡಿದೆ ಎಂದು ನೀವು ಭಾವಿಸುತ್ತೀರಾ ?

   ಆರಂಭದಲ್ಲಿ ನಾನು ಹಾಗೆಯೇ ಭಾವಿಸಿದ್ದೆ. ಆದರೆ ತಮಿಳುನಾಡಿನ ಸಾಮಾನ್ಯ ಜನರಿಂದ ಬೆಂಬಲದ ಮಹಾಪೂರವೇ ಹರಿದು ಬರುತ್ತಿದೆ ಮತ್ತು ಇದು ನನ್ನಲ್ಲಿ ಸ್ಥೈರ್ಯವನ್ನು ಮೂಡಿಸಿದೆ. ಅವರಿಗೆ ಇತರ ಯಾವುದೇ ರಾಜಕಾರಣಿಗಳಿಗಿಂತ ನಾನು ತುಂಬ ಚೆನ್ನಾಗಿ ಗೊತ್ತು. ನನ್ನ ಕಾರ್ಯ ರಾಜಕೀಯದಿಂದ ಕೂಡಿರಲಿಲ್ಲ ಮತ್ತು ತಿರುವಳ್ಳುವಾರ್‌ಗಾಗಿ ಚೆನ್ನೈ ಮತ್ತು ದಿಲ್ಲಿಯಲ್ಲಿ ನನ್ನ ಅಭಿಯಾನಗಳನ್ನು ಪ್ರತಿಯೊಂದು ಪಕ್ಷದ ಪ್ರತಿಯೊಬ್ಬರೂ ಬೆಂಬಲಿಸಿದ್ದರು.

ತಿರುವಳ್ಳುವಾರ್ ಕಾರ್ಯಕ್ರಮ ನಡೆದಾಗ ಸಂಸತ್ತಿನಲ್ಲಿ ಮೊದಲ ಬಾರಿಗೆ ಸಿಪಿಐ, ಸಿಪಿಎಂ, ಕಾಂಗ್ರೆಸ್, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರು. ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಹರಿದ್ವಾರದಲ್ಲಿ ತಿರುವಳ್ಳುವಾರ್ ಪ್ರತಿಮೆ ಸ್ಥಾಪನೆಯಲ್ಲಿ ನಮಗೆ ನೆರವಾಗಿದ್ದರು ಮತ್ತು ಚೆನ್ನೈನಲ್ಲಿ ವಿದಾಯ ಸಮಾರಂಭದಲ್ಲಿ ನಮ್ಮಾಂದಿಗೆ ಭಾಗಿಯಾಗಲು ಇಬ್ಬರು ಹಿರಿಯ ಸಚಿವರನ್ನು ಕಳುಹಿಸಿದ್ದರು. ಅವರಿಗೆಲ್ಲ ನನ್ನ ಕೆಲಸದ ಬಗ್ಗೆ ಗೊತ್ತಿತ್ತು.

ಅವರ ನೆರವು ಅದ್ಭುತವಾಗಿತ್ತು ಮತ್ತು ತಮಿಳುನಾಡಿನ ಇತಿಹಾಸದಲ್ಲಿ ಅಭೂತಪೂರ್ವವಾಗಿತ್ತು.

ನಿಮ್ಮ ಹೇಳಿಕೆ ನಿಮಗೆ ಸಮಸ್ಯೆಯನ್ನು ಸೃಷ್ಟಿಸಲಿದೆ ಎನ್ನುವುದು ನಿಮಗೆ ಗೊತ್ತಾಗಿದ್ದು ಯಾವಾಗ?

 ಮರುದಿನ ಬೆಳಿಗ್ಗೆ ಮಾಧ್ಯಮಗಳು ನನ್ನ ಪ್ರತಿಕ್ರಿಯೆಯನ್ನು ಕೇಳಿಕೊಂಡು ಬಂದಾಗ ನನಗೆ ಆಘಾತವಾಗಿತ್ತು. ನಾನು ಮತ್ತೊಮ್ಮೆ ನನ್ನ ಹೇಳಿಕೆಯನ್ನು ಓದಿದ್ದೆ ಮತ್ತು ನಾನು ತಪ್ಪಾಗಿ ಮಾತನಾಡಿದ್ದೇನೆ ಎನ್ನುವುದನ್ನು ಅರಿತುಕೊಂಡಿದ್ದೆ.

ಒಂದು ಕ್ಷಣವೂ ಕಾಯದೇ ನಾನು ನನ್ನ ಕ್ಷಮೆಯಾಚನೆಯನ್ನು ಟ್ವೀಟಿಸಿದ್ದೆ. ನನ್ನ ವಾಕ್ಯವನ್ನು ಹೆಚ್ಚು ಉಗ್ರ ಮತ್ತು ಒರಟನ್ನಾಗಿಸಲು ನನ್ನ ಸಂದರ್ಶನದ ಕೊನೆಯ ಶಬ್ದಗಳನ್ನು ಮತ್ತು ಸಂದರ್ಶನದ ಸಂದರ್ಭವನ್ನು ಕೈಬಿಟ್ಟು ಕುಚೇಷ್ಟೆ ಮಾಡಲಾಗಿದೆ ಎನ್ನುವುದು ನನ್ನ ಮನಸ್ಸಿಗೆ ಹೊಳೆದಿತ್ತು.

ಅದೇನೇ ಇರಲಿ,ನಾನು ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ

ನಿಮ್ಮ ಹೇಳಿಕೆಗಾಗಿ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಬೇಕೆಂಬ ಲೋಕಸಭೆಯಲ್ಲಿ ಕಾಂಗ್ರೆಸ್ ಆಗ್ರಹಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಪಶ್ಚಾತ್ತಾಪ ಪಡುವುದು ಗಾಂಧಿವಾದವಾಗಿದೆ ಮತ್ತು ವಿಶ್ವಾದ್ಯಂತ ಒಪ್ಪಿಕೊಳ್ಳಲಾಗಿರುವ ಸಾರ್ವತ್ರಿಕ ವೌಲ್ಯವಾಗಿದೆ. ನಾನು ವಾದವನ್ನೂ ಮಾಡಲಿಲ್ಲ,ಯಾರನ್ನೂ ದೂರಲೂ ಇಲ್ಲ. ಆದರೆ ನನ್ನ ತಪ್ಪು ಒಪ್ಪಿಕೊಂಡಿದ್ದೇನೆ

ಅವರು ಏನು ಮಾಡಲು ನಿರ್ಧರಿಸುತ್ತಾರೋ ಅದು ಅವರ ಆಯ್ಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News