ಬೇಡಿಕೆ ಈಡೇರಿಕೆಗೆ ಆಡಳಿತವರ್ಗ ಒಪ್ಪಿಗೆ: ಸುಝ್ಲಾನ್ ಕಂಪೆನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ ಅಂತ್ಯ
ಪಡುಬಿದ್ರೆ, ಎ.11: ಕಂಪೆನಿ ಆಡಳಿತ ವರ್ಗ, ಅಧಿಕಾರಿಗಳು, ಜನಪ್ರತಿನಿಧಿಗಳು ನಡೆಸಿದ ಮಾತುಕತೆಯಲ್ಲಿ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಸುಝ್ಲಾನ್ ಕಂಪೆನಿಯ ವಿರುದ್ಧ ಗುತ್ತಿಗೆ ಆಧಾರಿತ ಕಾರ್ಮಿಕರು ಎರಡು ದಿನಗಳಿಂದ ನಡೆಸುತ್ತಿದ್ದ ತಮ್ಮ ಪ್ರತಿಭಟನೆಯನ್ನು ಮಂಗಳವಾರ ಅಂತ್ಯಗೊಳಿಸಿದರು.
ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಸುಝ್ಲಾನ್ ಕಂಪೆನಿಯ ವೈಎಸ್‌ಎಫ್, ಎಸ್‌ಎಸ್‌ಪಿಎಲ್, ಯುನಿಟೆಕ್ ಗುತ್ತಿಗೆ ಏಜೆನ್ಸಿಯ ಸುಮಾರು 750 ಗುತ್ತಿಗೆ ಆಧಾರಿತ ಕಾರ್ಮಿಕರು ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಜೊತೆಗೂಡಿ ಕಂಪೆನಿಯ ಗೇಟಿನ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ್ದರು. ಎರಡನೆ ದಿನವಾದ ಇಂದು ಕೂಡ ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್, ದಸಂಸ ಮುಖಂಡ ಶೇಖರ್ ಹೆಜಮಾಡಿ, ವಾಸುದೇವ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯ ನಿರ್ದೇಶನದಂತೆ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಕಾರ್ಮಿಕ ಅಧಿಕಾರಿ ವಿಶ್ವನಾಥ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಕಂಪೆನಿಯ ಆಡಳಿತ ವರ್ಗದೊಂದಿಗೆ ಮುಷ್ಕರದ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಕುಮಾರ ಸ್ವಾಮಿ ಹಾಗೂ ಕಾಪು, ಪಡುಬಿದ್ರೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
‘ನಮ್ಮನ್ನು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ಎ.9ರಿಂದ ಕೆಲಸದಿಂದ ವಜಾಗೊಳಿಸಲಾಗಿದ್ದು, ಮತ್ತೆ ಕೆಲಸದಲ್ಲಿ ಮುಂದುವರಿಸಬೇಕು’ ಎಂದು ಕಾರ್ಮಿಕರು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಇದಕ್ಕೆ ಆಡಳಿತ ವರ್ಗ ‘ಮಾರುಕಟ್ಟೆ ಸಮಸ್ಯೆ ಹಾಗೂ ಬೇಡಿಕೆ ಕೊರತೆಯಿಂದ ಬ್ಲೇಡ್‌ಗಳ ತಯಾರಿಕೆ ಸ್ಥಗಿತಗೊಳಿಸಿರುವುದರಿಂದ ಇವರಿಗೆ ಕೆಲಸ ನೀಡಲು ಸಾಧ್ಯವಿಲ್ಲ. ಕಂಪೆನಿ ಈಗ ಸಂಪೂರ್ಣ ನಷ್ಟದಿಂದ ನಡೆಯುತ್ತಿದೆ ಎಂದು ಹೇಳಿದರು. ಇದರಿಂದ ಕಾರ್ಮಿಕ ಹಾಗೂ ಗುತ್ತಿಗೆದಾರರ ನಡುವಿನ ಗೊಂದಲ ಮತ್ತೆ ಮುಂದುವರಿಯಿತು.
ಒಮ್ಮತದ ನಿರ್ಧಾರ: ಈ ವೇಳೆ ಆಗಮಿಸಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಡಳಿತ ವರ್ಗಕ್ಕೆ ತಿಳಿಸಿದರು. ಈ ಕುರಿತು ಸಭೆ ನಡೆಸಿ ಹಲವಾರು ಸಲಹೆ ಸೂಚನೆಗಳನ್ನು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಯಿತು. ಗುತ್ತಿಗೆ ಏಜೆನ್ಸಿ ಯೂನಿಟೆಕ್ ಕಾರ್ಪೊರೇಶನ್ ಗುತ್ತಿಗೆ ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿರುವ ಬೋನಸ್‌ನ್ನು ಕೂಡಲೇ ಪಾವತಿಸಬೇಕು. ಎ.8ರವರೆಗೆ ಕೆಲಸ ಮಾಡಿದ ಕಾರ್ಮಿಕರಿಗೆ ಪೂರ್ಣ ಸಂಬಳವನ್ನು ನೀಡಬೇಕು. ಎ.9ರಿಂದ ಮೇ 31ರವರೆಗೆ ಪ್ರಸ್ತುತ ಕಾರ್ಮಿಕರು ಪಡೆಯುತ್ತಿರುವ ವೇತನದ ಶೇ.50ರಷ್ಟು ಪಾವತಿಸಲು ಒಪ್ಪಿಕೊಳ್ಳಲಾಯಿತು. ಈಗ ಇರುವ ಗುತ್ತಿಗೆ ಏಜೆನ್ಸಿಯನ್ನು ಕಂಪೆನಿ ಬದಲಾಯಿಸಿದರೆ ಮುಂದೆ ಬರುವ ಏಜೆನ್ಸಿ ಮೂಲಕ ಈಗ ಕೆಲಸ ಮಾಡಿರುವ ಗುತ್ತಿಗೆ ಕಾರ್ಮಿಕರನ್ನೇ ಮುಂದುವರಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಕಾರ್ಮಿಕರನ್ನು ವರ್ಗಾ ವಣೆ ಮಾಡಬೇಕಾದಲ್ಲಿ ಕಾರ್ಮಿಕರೊಂದಿಗೆ ಚರ್ಚಿಸಿ ಬೇರೆ ಯುನಿಟ್‌ಗೆ ವರ್ಗಾವಣೆ ಮಾಡಬೇಕು. ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿ ಕರನ್ನು ಗುತ್ತಿಗೆ ಏಜೆನ್ಸಿ ಬದಲಾದರೂ ಮುಂದುವರಿಸಬೇಕು. ಈ ಅವಧಿಯಲ್ಲಿ ಕಾರ್ಮಿಕರು ಯಾವುದೇ ಮುಷ್ಕರ, ಪ್ರತಿಭಟನೆ ನಡೆಸಬಾರದು ಎನ್ನುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಈ ಎಲ್ಲಾ ತೀರ್ಮಾನಗಳಿಗೆ ಕಾರ್ಮಿಕರು, ಆಡಳಿತ ವರ್ಗ ಮತ್ತು ಗುತ್ತಿಗೆ ಏಜೆನ್ಸಿಗಳು ಒಪ್ಪಿಗೆ ಸೂಚಿಸಿದವು. ಅದರಂತೆ ಕಾರ್ಮಿಕರು ಎರಡು ದಿನಗಳಿಂದ ನಡೆಸುತ್ತಿದ್ದ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.
ಸಭೆಯಲ್ಲಿ ಸುಝ್ಲಾನ್ ಕಂಪೆನಿಯ ಅಧಿಕಾರಿಗಳಾದ ಅಂಟೋನಿ ಫಿಲಿಪ್, ದಕ್ಷಿಣಾ ಮೂರ್ತಿ, ಪ್ರಶಾಂತ್ ಕಾರ್ಕಳ, ಹೇಮಂತ್ ಕುಮಾರ್, ಗುತ್ತಿಗೆ ಕಾರ್ಮಿಕರಾದ ಕುಮಾರ್ ಶೆಟ್ಟಿ, ಸಂದೀಪ್ ಪೂಜಾರಿ, ಮೋಹನ್ ಬಂಗೇರ ಸುರತ್ಕಲ್, ಸುನೀಲ್ ಕುಮಾರ್ ನಿಟ್ಟೆ ಹಾಜರಿದ್ದರು.