ಉಡುಪಿ:23ಕ್ಕೆ ಗರೋಡಿ,ಗುರಿಕಾರರಿಗೆ ಸನ್ಮಾನ,ಸಮಾವೇಶ
ಉಡುಪಿ, ಎ.11: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸನ್ಮಾನ ಹಾಗೂ ಸಮಾವೇಶ ಎ.23ರ ರವಿವಾರ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ತಿಳಿಸಿದ್ದಾರೆ.
ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವರ ಆರಾಧನಾ ಕೇಂದ್ರಗಳಾಗಿರುವ ಗರೋಡಿ, ತುಳುನಾಡಿನ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ,ದ.ಕ. ಜಿಲ್ಲೆಯಲ್ಲಿ ಒಟ್ಟು 242 ಗರೋಡಿಗಳಿದ್ದು 2000ಕ್ಕೂ ಅಧಿಕ ಗುರಿಕಾರರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 163 ಗರೋಡಿಗಳಿದ್ದು 1,500ಕ್ಕೂ ಅಧಿಕ ಗುರಿಕಾರರಿದ್ದಾರೆ ಎಂದರು. ಗುರಿಕಾರರಾಗಿ ಹಾಗೂ ಬಿಲ್ಲವ ಸಮಾಜಕ್ಕೆ ಊರ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿರುವ ಪ್ರಮುಖರನ್ನು ಗುರುತಿಸಿ ಸನ್ಮಾನಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಅಚ್ಯುತ ಅಮೀನ್ ತಿಳಿಸಿದರು.
ಈ ಸನ್ಮಾನ ಕಾರ್ಯಕ್ರಮವು ಎ.23ರಂದು ಬೆಳಗ್ಗೆ 9:00ರಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ.ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಲಿದ್ದು, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಕಾಪು ಶಾಸಕ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಕೆ.ರಘುಪತಿ ಭಟ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಬಿ.ಎನ್.ಶಂಕರಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾ. ದೇಯಿ ಬೈದೆತಿ ಪುಸ್ತಕವನ್ನು ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ ಬಿಡುಗಡೆಗೊಳಿಸಲಿದ್ದಾರೆ.
ಬಳಿಕ ಬಿಲ್ಲವ ಸಮುದಾಯದಲ್ಲಿ ಗರೋಡಿ ಗುರಿಕಾರರ ಮಹತ್ವ, ಕೋಟಿ ಚೆನ್ನಯರ ವೀರಗಾಥಾ ಸಂದೇಶ, ತುಳುನಾಡಿನ ಸಂಸ್ಕೃತಿಗೆ ಕೋಟಿ ಚೆನ್ನಯರ ಕೊಡುಗೆ, ತುಳುನಾಡಿನ ಪ್ರಾತ: ಸ್ಮರಣೀಯರು-ಕೋಟಿ ಚೆನ್ನಯರು ವಿಷಯದ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ.
ಸಮಾರೋಪ ಸಮಾರಂಭ ಅಪರಾಹ್ನ 3:00ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಜಿಪಂ ಅಧ್ಯಕ್ಷ ದಿನಕರ ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಬನ್ನಂಜೆ ಬಾಬು ಅಮೀನ್ ಹಾಗೂ ಆದಿ ಉಡುಪಿ ಶ್ರೀಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ದಾನೋದರ ಕಲ್ಮಾಡಿ ಅವರನ್ನು ಸನ್ಮಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಸಮಾಜದ ಮುಖಂಡರಾದ ಪ್ರವೀಣ್ ಎಂ. ಪೂಜಾರಿ, ಕೆ.ರಂಜನ್, ಪ್ರಭಾಕರ ಪೂಜಾರಿ, ಸುರೇಶ್ ಎಂ, ದಿನೇಶ್ ಜಿ.ಸುವರ್ಣ, ಪ್ರಭಾಕರ ಎಸ್. ಪೂಜಾರಿ, ರಾಜೇಶ್ ಎಸ್.ಕರ್ಕೇರ, ಪ್ರಭಾಕರ ಜೆ.ಸುವರ್ಣ, ಲಕ್ಷ್ಮಣ್ ಬಿ.ಅಮೀನ್, ಪ್ರಕಾಶ್ ಸುವರ್ಣ ಮೂಡುಕುದ್ರು ಉಪಸ್ಥಿತರಿದ್ದರು.