ಉಡುಪಿಯಲ್ಲಿ ತುಳುನಾಡ ಒಕ್ಕೂಟ ಅಸ್ತಿತ್ವಕ್ಕೆ
ಉಡುಪಿ, ಎ.11: ತುಳು ಭಾಷೆ ಹಾಗೂ ತುಳುನಾಡಿನ ರಕ್ಷಣೆಗೆ, ಜನರ ಸ್ವಾಭಿಮಾನ,ಪರಿಸರದ ಮೇಲಾಗುತ್ತಿರುವ ದಬ್ಬಾಳಿಕೆ, ಅನ್ಯಾಯ ಗಳನ್ನು ಪ್ರತಿಭಟಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಮಟ್ಟದಲ್ಲಿ ತುಳುನಾಡ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ ಎಂದು ಜಿಲ್ಲಾಧ್ಯಕ್ಷ ಐಕಳಬಾವ ಚಿತ್ತರಂಜನ್ ದಾಸ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ತರಂಜನ ದಾಸ್ ಶೆಟ್ಟಿ ಅವರು, ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ನಂಬಿಕೆಗಳ ಆಧಾರದಲ್ಲಿ ನೆಲ,ಜಲದ ರಕ್ಷಣೆಗಾಗಿ ತೆಲಂಗಾಣದ ಮಾದರಿಯಲ್ಲಿ ಪ್ರತ್ಯೇಕ ತುಳುನಾಡಿಗಾಗಿ ಜಾತಿ, ಮತ, ಭೇದವಿಲ್ಲದೇ ಹೋರಾಡುವ ಗುರಿ ಒಕ್ಕೂಟಕ್ಕಿದೆ ಎಂದರು. ಈ ಬಗ್ಗೆ ಜನಜಾಗೃತಿ ಮೂಡಿಸುವುದು ಮಾತ್ರವಲ್ಲದೇ, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿ ಸಂವಿಧಾನದ 8ನೆ ಪರಿಚ್ಛೇದದಲ್ಲಿ ಅತಿಶೀಘ್ರದಲ್ಲೇ ಸೇರ್ಪಡೆಗೊಳಿಸಲು ಸರಕಾರಗಳ ಮೇಲೆ ಒತ್ತಡ ಹೇರಲಾಗುವುದು ಎಂದರು.
ಇತಿಹಾಸ ಪ್ರಸಿದ್ಧ ಕಂಬಳ, ಭೂತಾರಾಧನೆ, ನಾಗಾರಾಧನೆಗಳು ನೇಪಥ್ಯಕ್ಕೆ ಸರಿದು, ನಿರುದ್ಯೋಗ, ಭ್ರಷ್ಟತೆ, ಮಾಲಿನ್ಯತೆ ವಿಜೃಂಭಿಸತೊಡಗಿವೆ. ಇವುಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಸುರೇಂದ್ರ ನಿಟ್ಟೂರು, ಮಹಿಳಾ ಅಧ್ಯಕ್ಷೆ ಸುಕನ್ಯ ಪ್ರಭಾಕರ್, ಕಾರ್ಯದರ್ಶಿ ಬೇಬಿ ನಾಗೇಶ್, ,ಸಂಘಟನಾ ಕಾರ್ಯದರ್ಶಿ ಮುಸ್ತಾಕ್ ಅಲಿ, ಕಾರ್ಕಳ ತಾಲೂಕು ಅಧ್ಯಕ್ಷ ರವಿಚಂದ್ರ ಆಚಾರ್ಯ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ, ರಾಜೇಶ್ ಕುಲಾಲ್ ಉಪಸ್ಥಿತರಿದ್ದರು.