ನಗರದಲ್ಲಿ ಗಾಂಜಾ ಮಾರಾಟ ಪೊಲೀಸ್ ಇಲಾಖೆ ನಿಗಾ ವಹಿಸಬೇಕು; ಶಕುಂತಳಾ ಶೆಟ್ಟಿ ಸೂಚನೆ
ಪುತ್ತೂರು,ಎ.11: ನಗರದಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಗುಮಾನಿಯಿದೆ. ಅಮಾಯಕರು ಪಿಡುಗಿಗೆ ಬಲಿಯಾಗದಂತೆ ಪೊಲೀಸ್ ಇಲಾಖೆ ಮುತುವರ್ಜಿ ವಹಿಸಬೇಕೆಂದು ಶಾಸಕಿ ಶಕುಂತಳಾ ಶೆಟ್ಟಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯು ಶಾಸಕಿ ಶಕುಂತಳಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಕುಂತಳಾ ಶೆಟ್ಟಿ ಅವರು, ಅಮಾಯಕರು ಗಾಂಜಾ ಪಿಡುಗಿಗೆ ಬಲಿಯಾಗದಂತೆ ಪೊಲೀಸರು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.
ಬಜತ್ತೂರು ಗ್ರಾಮವು ಪುತ್ತೂರಿಗೆ ಸಮೀಪವಿದ್ದು,ಕಡಬ ತಾಲೂಕಿಗೆ ಈ ಗ್ರಾಮವನ್ನು ಸೇರ್ಪಡೆಗೊಳಿಸದೆ ಪುತ್ತೂರು ತಾಲೂಕಿನಲ್ಲಿಯೇ ಉಳಿಸಿಕೊಳ್ಳಬೇಕೆಂದು ಜಿಪಂ ಸದಸ್ಯ ಸರ್ವೋತ್ತಮ ಗೌಡ ಮತ್ತು ತಾಪಂಮಸ್ಥಾಯಿ ಸಮಿತಿಯ ಅಧ್ಯಕ್ಷ ಮುಕುಂದ ಅವರು ಸಭೆಯಲ್ಲಿ ಆಗ್ರಹಿಸಿದರು.
ಸರ್ಕಾರದ ವತಿಯಿಂದ ಶಾಲಾ ಕಟ್ಟಡ ದುರಸ್ತಿಗೆಂದು ಮಂಜೂರಾದ 20 ಲಕ್ಷ ರೂ. ಅನುದಾನ ಬಳಕೆಯ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಜಿಪಂ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಪಡೆದರು.ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿದ್ದಾಗ ಆಕ್ರೋಶಗೊಂಡ ಶಾಸಕಿ ಅವರು, ರಾಜ್ಯ ಸರ್ಕಾರ ಶಾಲಾ ಕಟ್ಟಡ ದುರಸ್ತಿಗೆಂದು ಅನುದಾನ ಬಿಡುಗಡೆಗೊಳಿಸಿದೆ. ಇದಕ್ಕೆ ಸಂಬಂಧಿಸಿದ ಸಮರ್ಪಕ ಮಾಹಿತಿ ನಿಮ್ಮಲ್ಲಿಲ್ಲವಾದರೆ ಇದರಿಂದ ನಿಮ್ಮ ಇಚ್ಚಾಶಕ್ತಿಯನ್ನು ತೋರಿಸುತ್ತದೆ ಎಂದು ನುಡಿದರು.
ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ .ಎಸ್, ಕಡಬ ತಹಶೀಲ್ದಾರ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.