×
Ad

"ಕುಸೆಲ್ದರಸ"ನಿಗೆ ರಾಜ್ಯ ಪ್ರಶಸ್ತಿಯ ಗರಿ

Update: 2017-04-11 21:55 IST

ಮಂಗಳೂರು, ಎ.11: "ಕುಸೆಲ್ದರಸೆ’ ಖ್ಯಾತಿಯ ತುಳು ರಂಗಭೂಮಿ ಹಾಗೂ ಚಿತ್ರನಟ ಮಂಗಳೂರಿನ ನವೀನ್ ಡಿ. ಪಡೀಲ್ 2016ನೆ ಸಾಲಿನ ಉತ್ತಮ ಪೋಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇದರೊಂದಿಗೆ ಪ್ರಾದೇಶಿಕ ಭಾಷೆಗಳ ಪೈಕಿ ತುಳು ಚಲನಚಿತ್ರದಲ್ಲಿ ಪ್ರಥಮ ಬಾರಿಗೆ ಪೋಷಕ ಪಾತ್ರದಲ್ಲಿ ಅಭಿನಯಿಸಿದ ಪಡೀಲ್ ಈ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ. ಸೂರ್ಯ ಮೆನನ್ ನಿರ್ದೇಶನದ ‘ಕುಡ್ಲ ಕೆಫೆ’ ತುಳು ಚಲನಚಿತ್ರದ ಪಾತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ‘‘ಪ್ರಶಸ್ತಿ ಬಂದಿರುವುದು ತಂಬಾ ಸಂತಸ ತಂದಿದೆ. ಕನ್ನಡ, ಕೊಂಕಣಿ ಇತರ ಪ್ರಾದೇಶಿಕ ಭಾಷೆಗಳ ನಡುವೆ ಪ್ರಥಮ ಬಾರಿಗೆ ನನಗೆ ತುಳುವಿನಲ್ಲಿ ಉತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ. ಇದಕ್ಕಾಗಿ ತುಳುನಾಡಿನ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’’ಎಂದು ನವೀನ್ ಡಿ. ಪಡೀಲ್ ಪತ್ರಿಕೆಯೊಂದಿಗೆ ಹರುಷವನ್ನು ಹಂಚಿಕೊಂಡಿದ್ದಾರೆ.

ತುಳು ನಾಟಕರಂಗದಲ್ಲಿ ಖ್ಯಾತ ಹಾಸ್ಯ ನಟನಾಗಿ, ಪೋಷಕ ನಟನಾಗಿ ಹಾಸ್ಯ ನಾಟಕಗಳ ಪ್ರಮುಖ ನಟನಾಗಿ ಮಿಂಚಿರುವ ನವೀನ್ ಡಿ. ಪಡೀಲ್ ಸುಮಾರು 70ಕ್ಕೂ ಅಧಿಕ ತುಳು ಚಲನಚಿತ್ರಗಳ ಜೊತೆಗೆ ಕಿರುತೆರೆಯಲ್ಲೂ ನಟಿಸಿ ಮಿಂಚುತ್ತಿದ್ದಾರೆ.

 ‘ಕುಡ್ಲ ಕೆಫೆ’ ಕರಾವಳಿಯ ಹೊಟೇಲ್ ಉದ್ಯಮದಲ್ಲಿನ ಏಳು ಬೀಳುಗಳನ್ನೊಳಗೊಂಡ ಕೌಟುಂಬಿಕ ಹಿನ್ನೆಲೆ ಮತ್ತು ಸಾಮಾಜಿಕ ಪರಿಸರದ ಸುತ್ತ ಹೆಣೆದುಕೊಂಡ ಚಿತ್ರ. ಹೊಟೇಲ್ ವ್ಯವಹಾರದಲ್ಲಿ ಸೋತು ಖಿನ್ನತೆಗೊಳಗಾಗುವವನಾಗಿ ನವೀನ್ ಪಡೀಲ್ ಅಭಿನಯಿಸಿದ್ದಾರೆ. ಈ ಸೋಲಿನಿಂದ ಪಾರಾಗಲು ಮತ್ತು ಉದ್ಯಮವನ್ನು ಉಳಿಸಲು ಕಬಡ್ಡಿ ಕ್ರೀಡೆಯನ್ನು ಅವಲಂಬಿಸಿ ಮತ್ತೆ ಯಶಸ್ಸು ಕಾಣುವ ಪಾತ್ರದಲ್ಲಿ ನವೀನ್ ಡಿ. ಪಡೀಲ್ ಲವಲವಿಕೆಯ ಅಭಿನಯ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News